ಕಾಸರಗೋಡು, ಆ 11 (DaijiworldNews/SM): ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ವ್ಯಾಪಕ ನಷ್ಟ ಉಂಟಾಗಿದ್ದು, ಇದನ್ನು ರಾಜ್ಯವು ಜತೆಗೂಡಿ ಎದುರಿಸಲಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಹೇಳಿದರು.
ಕಾಸರಗೋಡು ಜಿಲ್ಲೆಯ ನೆರೆ, ಪ್ರವಾಹದ ಬಗ್ಗೆ ಹೊಸದುರ್ಗ ತಾಲೂಕು ಕಚೇರಿಯಲ್ಲಿ ನಡೆಸಿದ ಅವಲೋಕನಾ ಸಭೆಯಲ್ಲಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು. ನೆರೆ ಪರಿಹಾರಕ್ಕಾಗಿ ಸರಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಜಾಗೃತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2018ರಲ್ಲಿ ರಾಜ್ಯದಲ್ಲಿ 31,000 ಕೋಟಿ ರೂ. ನಷ್ಟ ಉಂಟಾಗಿದೆ. ಈ ವರ್ಷ ಅದೇ ರೀತಿಯ ವಿನಾಶ ಉಂಟಾಗಿದೆ ಎಂದರು.
ಇನ್ನು ನಾಲ್ಕು ದಿನಗಳ ಕಾಲ ಕಾಸರಗೋಡು ಜಿಲ್ಲೆಯನ್ನು ಕಾಡಿದ ಮಹಾಮಳೆಗೆ ಆದಿತ್ಯವಾರ ಅಲ್ಪ ಬಿಡುವು ಲಭಿಸಿದೆ. ಜಿಲ್ಲೆಯಲ್ಲಿ ಸೋಮವಾರದ ತನಕ ರೆಡ್ ಅಲರ್ಟ್ ಮುಂದುವರಿಯಲಿದೆ. ಮಳೆ ಪ್ರಮಾಣ ಕುಸಿದ ಹಿನ್ನಲೆಯಲ್ಲಿ ತಗ್ಗು ಪ್ರದೇಶ ಹಾಗೂ ನದಿಗಳ ನೀರು ಇಳಿಕೆಯಾಗತೊಡಗಿದೆ. ಜಿಲ್ಲೆಯಲ್ಲಿ 31 ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು 1169 ಕುಟುಂಬಗಳ 3882 ಮಂದಿ ಪುನರ್ವಸತಿ ಕೇಂದ್ರದಲ್ಲಿದ್ದಾರೆ.
ಸಂತ್ರಸ್ಥರಿಗೆ ಅಗತ್ಯ ವಸ್ತು, ಆಹಾರ ಹಾಗೂ ಇತರ ಸೌಕರ್ಯಗಳಿಗೆ ಜಿಲ್ಲಾಡಳಿತ ಎಲ್ಲಾ ವ್ಯವಸ್ಥೆ ಮಾಡಿದೆ. ಪುನರ್ವಸತಿ ಕೇಂದ್ರಗಳಿಗೆ ಅಗತ್ಯ ಆಹಾರ, ವಸ್ತುಗಳು ಹರಿದು ಬರತೊಡಗಿದೆ.