ಉಡುಪಿ,ಆ.11 (Daijiworld News/RD): ಭಾರೀ ಗಾಳಿ ಮಳೆಯ ಪರಿಣಾಮದಿಂದಾಗಿ ಜಿಲ್ಲೆಯ ಬೈಂದೂರು ತಾಲೂಕು ಕೆರ್ಗಾಲು ನಂದನವನ ಶಾಲೆಯ ಗೋಡೆ ಸಂಪೂರ್ಣ ಕುಸಿತಗೊಂಡ ಘಟನೆ ಆ.10.ರ ಶನಿವಾರ ತಡರಾತ್ರಿ ಸಂಭವಿಸಿದೆ.
ನಿನ್ನೆ ಸುರಿದ ಭಾರಿ ಗಾಳಿ ಮಳೆಗೆ ಮಧ್ಯಾಹ್ನವೇ ಶಾಲೆಯ ಗೋಡೆಗಳು ಧರೆಗೆ ಉರಳಲು ಪ್ರಾರಂಭಿಸಿದ್ದು, ನಂತರ ಕೆಲಹೊತ್ತಿನ ಬಳಿಕ ಶಾಲೆಯ ಗೋಡೆಗಳು ಧರಶಾಯಿಯಾದವು. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಭಾರಿ ಶಬ್ದದೊಂದಿಗೆ ಶಾಲೆಯು ಕುಸಿತಗೊಂಡಿದೆ. ಇದರಿಂದ ಶಾಲೆಯ ಇಡೀ ಕಟ್ಟಡ ಜಖಂಗೊಂಡಿದೆ. ಶಾಲೆಯ ಮಧ್ಯದ ಕೊಠಡಿ ಸಂಪೂರ್ಣ ನೆಲಸಮವಾಗಿದೆ. ಅದೃಷ್ಠವಶಾತ್ ಶಾಲೆಯ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಇನ್ನೂ ಮಳೆ ಮುಂದುವರಿದಲ್ಲಿ ಈಗಾಗಲೇ ಬಿರುಕು ಮೂಡಿರುವ ಗೋಡೆ ಸಹಿತ, ಪೂರ್ಣ ಶಾಲೆ ಕುಸಿಯುವ ಭೀತಿ ಇದೆ. ಶಾಲೆಯಲ್ಲಿ ಎಲ್ ಕೆಜಿ, ಯುಕೆಜಿ ತರಗತಿಗಳಿದ್ದು, ಒಟ್ಟು25 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯ ಪಕ್ಕದಲ್ಲಿಯೇ ಹೊಳೆ ಇದ್ದು, ಕಳೆದ ಹಲವು ದಿನಗಳ ಮಳೆಯಿಂದ ಈ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ ಕಟ್ಟಡ ನೆಲಸಮವಾಗಿದೆ ಎನ್ನಲಾಗಿದೆ.
100 ವರ್ಷ ಇತಿಹಾಸ ಇರುವ ಈ ಶಾಲೆಗೆ ಇದೆ. 45 ವರ್ಷ ಹಳೆಯ ಈ ಶಾಲಾ ಕಟ್ಟಡ ಸ್ಥಳಕ್ಕೆ ಶಾಸಕರು, ವಿವಿಧ ಅಧಿಕಾರಿಗಳು, ಪಂಚಾಯತ್ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.