ಮೈಸೂರು, ಡಿ 20 : ಸಾಂಸ್ಕೃತಿಕ ನಗರಿಯೆಂದೆ ಹೆಸರುವಾಸಿಯಾದ ಮೈಸೂರಿಗೆ ಡಿ 20ರ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು ಇದರಿಂದಾಗಿ ಮೈಸೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ಅನಾಮಧೇಯ ವ್ಯಕ್ತಿಯೊಬ್ಬ ಪೊಲೀಸರಿಗೆ ಸಾರ್ವಜನಿಕ ಉದ್ಯಾನವನದಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿ ತಿಳಿಸಿದ್ದು ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಮೈಸೂರಿನ ಪೀಪಲ್ಸ್ ಪಾರ್ಕ್ ಉದ್ಯಾನವನದಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ.ಇದರೊಂದಿಗೆ ಬಾಂಬ್ ಸ್ಕಾಡ್, ಡಾಗ್ ಸ್ಕಾಡ್ನಿಂದ ಸ್ಥಳ ಪರಿಶೀಲನೆ ನಡೆಸಿದ್ದು, ಈ ವೇಳೆ ಸ್ಥಳದಲ್ಲಿ ಬಟ್ಟೆಯಿಂದ ಸುತ್ತಿಟ್ಟಿರುವ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದೆ. ಬಾಂಬ್ ನಿಷ್ಕ್ರಿಯ ದಳದ ಇನ್ನಷ್ಟು ಸಿಬ್ಬಂದಿ ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪೊಲೀಸರ ಆಗಮನದಿಂದ ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ . ಅನುಮಾನಾಸ್ಪದ ವಸ್ತು ಬಾಂಬ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದ್ದು, ಪೊಲೀಸರು ಸ್ಥಳಕ್ಕೆ ಸಾರ್ವಜನಿಕರ ಪ್ರವೇಶಿಸದಂತೆ ನಿಷೇಧ ಮಾಡಿದ್ದಾರೆ. ಹೀಗಾಗಿ ಸದ್ಯ ಪಾರ್ಕ್ ಹಾಗೂ ಬಸ್ ನಿಲ್ದಾಣದ ಸುತ್ತಮುತ್ತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಈಗಾಗಲೇ ತನಿಖೆ ಮುಂದುವರಿಸಿದ್ದು , ಅನುಮಾನಾಸ್ಪದ ವಸ್ತುವಿನ ಪರಿಶೀಲನೆ ಬಳಿಕವೇ ಕರೆಯ ಸತ್ಯಾಸತ್ಯತೆ ಬಗ್ಗೆ ತಿಳಿಯಲಿದೆ.