ಉಡುಪಿ,ಆ.10 (Daijiworld News/RD): ಜಿಲ್ಲೆಯಲ್ಲಿ ಭಾರೀ ಮಳೆ ಬೀಳುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅಲ್ಲಿನ ಜನ ಜೀವನ ತೊಂದರೆಗಳಗಾಗುವ ಸಾಧ್ಯತೆ ಕಾರಣ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು, ಶುಕ್ರವಾರ ಮಧ್ಯರಾತ್ರಿ 12.30 ರಿಂದ 2.30 ರ ವರೆಗೆ , ಬ್ರಹ್ಮಾವರ ತಾಲೂಕು ವ್ಯಾಪ್ತಿಯ ತಗ್ಗು ಪ್ರದೇಶಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಪ್ಪೂರು, ಕುದ್ರುಬೆಟ್ಟು, ನಡುಬೆಟ್ಟು, ಬಾವಲಿಕುದ್ರು ಪ್ರದೇಶಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಈ ಪ್ರದೇಶಗಳು ತಗ್ಗು ಪ್ರದೇಶದಲ್ಲಿದ್ದು , ಭಾರೀ ಮಳೆಯಿಂದ ನರೆ ಪೀಡಿತವಾಗುವ ಸಾದ್ಯತೆಗಳಿದ್ದು, ಇಲ್ಲಿನ ಜನರ ಜೊತೆ ಸಂಪರ್ಕವಿಟ್ಟುಕೊಂಡು , ನೆರೆ ಸಂದರ್ಭದಲ್ಲಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ಅಗತ್ಯ ಉಪಕರಣಗಳು ಹಾಗೂ ಪರಿಹಾರ ಸಾಮಗ್ರಿಗಳನ್ನು ಸಿದ್ದವಾಗಿಟ್ಟುಕೊಂಡಿರುವಂತೆ ಬ್ರಹ್ಮಾವರ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ನಂತರ ಬ್ರಹ್ಮಾವರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ, ತಹಸೀಲ್ದಾರ್ ಕಚೇರಿಯಲ್ಲಿ ತೆರೆದಿರುವ 24*7 ಸಹಾಯನೀಡುವ ಕಂಟ್ರೋಲ್ ರೂಂ ಪರಿಶೀಲಿಸಿ, ಎಲ್ಲಾ ಸಿಬ್ಬಂದಿಗಳು ಕರ್ತವ್ಯದಲ್ಲಿ ತೊಡಗಿದ್ದು, ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಲ್ಲಿರುವ ಕಾರಣ, ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಲು ಎಲ್ಲಾ ಸಿಬ್ಬಂದಿಗಳು ಸನ್ನದ್ದರಿರುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಎಸ್ಪಿ ನಿಷಾ ಜೇಮ್ಸ್, ಬ್ರಹ್ಮಾವರ ತಹಸೀಲ್ದಾರ್ ಕಿರಣ್ ಗೌರಯ್ಯ, ಕಂದಾಯ ನೀರೀಕ್ಷಕರು, ಗ್ರಾಮ ಲೆಕ್ಕಿಗರು ಉಪಸ್ಥಿತರಿದ್ದರು.