ಮಂಗಳೂರು,ಆ.10 (Daijiworld News/RD): ಮಹಾಮಳೆಯಿಂದ ಕರಾವಳಿಯ ಹಲವು ಪ್ರದೇಶಗಳು ಜಲಾವೃತಗೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ರಾಜ್ಯದ ಮುಖ್ಯಮಂತ್ರಿ ಸಿ.ಎಂ. ಯಡಿಯೂರಪ್ಪ ಆ.11 ರ ಭಾನುವಾರದಂದು ಭೇಟಿ ನೀಡಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆ.11 ಭಾನುವಾರರಂದು ದಕ್ಷಿಣ ಕನ್ನಡ ಜಿಲ್ಲೆ ಹಾಗೂ 12 ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಪ್ರವಾಹ ಮತ್ತು ಭೂಕುಸಿತ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಇಂದೇ ಮಂಗಳೂರಿಗೆ ಭೇಟಿ ನೀಡಬೇಕಾಗಿತ್ತು ಆದರೆ ಕಾರಣಾಂತರಗಳಿಂದ ಆಗಲಿಲ್ಲ ಹಾಗಾಗಿ ಭೇಟಿ ನೀಡುವುದಾಗಿ ಹೇಳಿದ್ದಾರೆ. ಪ್ರಸ್ತುತ ಹವಾಮಾನದಲ್ಲಿ ವೈಮಾನಿಕ ಸಮೀಕ್ಷೆ ಸಾಧ್ಯವಿಲ್ಲದ ಕಾರಣ ರಸ್ತೆ ಮೂಲಕವೇ ಪ್ರವಾಹ ಪೀಡಿತ ಸ್ಥಳಗಳನ್ನು ಪರಿಶೀಲನೆ ನಡೆಸುತ್ತೇನೆ ಎಂದು ತನ್ನ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.
ದಕ್ಷಿಣ ಕನ್ನಡದ ಜೀವನದಿಗಳಾದ, ನೇತ್ರಾವತಿ, ಕುಮಾರಧಾರೆ, ಸೇರಿ ಜಿಲ್ಲೆಯಲ್ಲಿ ಹರಿಯುವ ಎಲ್ಲಾ ನದಿಗಳು ರೌದ್ರರೂಪ ತಾಳಿ ಹರಿಯುತ್ತಿದೆ. ನೂರಾರು ಮಂದಿ ನದಿ ಪ್ರವಾಹದಲ್ಲಿ ಸಿಲುಕಿದ್ದು, ಮನೆ ಮಠ ಕಳೆದುಕೊಂಡು ಕಣ್ಣೀರು ಸುರಿಸುತ್ತಿದ್ದಾರೆ. ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಅಲ್ಲಿನ ಪ್ರದೇಶಗಳು ಜಲಾವೃತಗೊಂಡಿದೆ. ಜಿಲ್ಲೆಯಲ್ಲಿ ಇದೀಗ 631 ಜನ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈಗಾಗಲೇ ಬಂಟ್ವಾಳದಲ್ಲಿ 19 ಜನರ ಎನ್ ಡಿ ಆರ್ ಏಫ್ ತಂಡ, ಹಾಗೂ ಬೆಳ್ತಂಗಡಿಯಲ್ಲಿ 13 ಎನ್ ಡಿ ಆರ್ ಏಫ್ ತಂಡ ಇದೆ. ಕಂಟ್ರೋಲ್ ರೂಮ್ ಟೋಲ್ ಫ್ರೀ ಸಂಖ್ಯೆ 1077ಆಗಿದ್ದು ಅಪಾಯದ ಸ್ಥಿತಿ ಎದುರಾದರೆ ಕೂಡಲೆ ಸಂಪರ್ಕಿಸಬಹುದು ಎಂದು ತಿಳಿಸಿದೆ.
ಬಿ.ಸಿ ರೋಡ್ ನ ಬಂಟರ ಭವನ, ಬ್ರಹ್ಮರಕೋಟ್ಲು ದೇವಸ್ಥಾನ , ಬಿ.ಸಿ ರೋಡ್ ಸರ್ವಿಸ್ ರಸ್ತೆ, , ಮಾಣಿ , ಪಾಣೇರು, ಪಡೀಲ್ , ಜಪ್ಪಿನ ಮೊಗೇರು, ಉಳ್ಳಾಲ, ಮಂಗಳೂರು ಬಂದರು, ಕಡೆಕಾರು, ಜಕ್ರೀಬೆಟ್ಟು ಮೊದಲಾದ ಪ್ರದೇಶ ಸಂಪೂರ್ಣ ಜಲಾವೃತಗೊಂಡಿದೆ.