ಕಾರ್ಕಳ, ಆ 10 (Daijiworld News/MSP): ನಕ್ಸಲ್ಪೀಡಿತ ಪ್ರದೇಶವಾಗಿರುವ ಈದು ನೂರಾಲ್ಬೆಟ್ಟುನ ಕನ್ಯಾಲು ಪ್ರದೇಶಕ್ಕೆ ಶಾಸಕ ವಿ.ಸುನೀಲ್ಕುಮಾರ್ ಭೇಟಿ ನೀಡಿದ್ದಾರೆ. ಭಾರೀ ಮಳೆಗೆ ಮಂಗಳಫಾರ್ಮ್ ಸಮೀಪದಲ್ಲಿ ಹಾದು ಹೋಗಿರುವ ರಸ್ತೆಯು ಕೊಚ್ಚಿ ಹೋಗಿರುವುದರಿಂದ ಜನಜೀವನ ಮೇಲೆ ನೇರ ಪರಿಣಾಮ ಬೀರಿದೆ.
ಇದೇ ರಸ್ತೆಯು ಕಳೆದ ವರ್ಷ ಕೂಡಾ ಹಾನಿಗೊಳಗಾಗಿತ್ತು. ರೂ.40 ಲಕ್ಷ ವೆಚ್ಚದಲ್ಲಿ ನೂತನ ರಸ್ತೆ ಮೋರಿ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿತ್ತಾದರೂ, ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ಆರಂಭಕ್ಕೆ ವಿಘ್ನು ಎದುರಾಗಿತ್ತು. ಅದೇ ಕಾರಣದಿಂದಾಗಿ ರಸ್ತೆ ಇಕ್ಕೆಲೆಗಳಲ್ಲಿ ಕರಿಕಲ್ಲುನಿಂದ ತಡೆಗೋಡೆ ನಿರ್ಮಿಸಿ ಮಣ್ಣು ತುಂಬಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿತ್ತು.
ಪ್ರಸ್ತುತ ದಿನದಲ್ಲಿ ರಸ್ತೆ ಸಂಪರ್ಕ ಕಡಿದು ಹೋದುದರಿಂದ ನಾಲ್ಕು ಕಿ.ಮೀ ದೂರದ ಮಾಪಾಲು ಮೂಲಕ ಸುತ್ತು ಬಳಸಿ ಕನ್ಯಾಲು ಸಂಪರ್ಕಿಸಲೇ ಬೇಕಾದ ಅಗತ್ಯ ಎದುರಾಗಿದೆ. ಕನ್ಯಾಲು ಪ್ರದೇಶದಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿರುವ ಮಲೆಕುಡಿಯ ಸಮುದಾಯದವರ ಹಲವು ಮನೆಗಳಿರುವುದು ಗಮನಾರ್ಹವಾಗಿದೆ.
ತಹಶೀಲ್ದಾರ್ ಪುರಂದರ ಹೆಗ್ಡೆ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮೇಜರ್ ಡಾ. ಹರ್ಷ, ಎಪಿಎಂಸಿ ಅಧ್ಯಕ್ಷ ಜಯವರ್ಮ ಮಾಪಾಲು, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ, ಗ್ರಾಮ ಪಂಚಾಯತ್ ಅಧ್ಯಕ್ಷ ಪುರುಷೋತ್ತಮ, ಗ್ರಾಮಾಂತರ ಠಾಣಾಧಿಕಾರಿ ನಾಸೀರ್ ಹುಸೈನ್ ಮೊದಲಾದವರು ಘಟನಾ ಸ್ಥಳಕ್ಕೆ ಭೇಟಿ ನೀಡಿದವರಲ್ಲಿ ಪ್ರಮುಖರಾಗಿದ್ದರು.