ಮಂಗಳೂರು, ಆ 10 (Daijiworld News/MSP): ಗುರುಪುರ - ಪಲ್ಗುಣಿ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಹಾಗೂ ನದಿ ನೀರು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತೀರಪ್ರದೇಶದ ನಿವಾಸಿಗಳು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದ್ದಾರೆ.
ಶುಕ್ರವಾರದಂದು ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನೇತ್ರಾವತಿ ನದಿ ಪಾತ್ರದಲ್ಲಿನ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಗುರುಪುರ - ಪಲ್ಗುಣಿ ನದಿ ಪಾತ್ರದ ಜನರಿಗೂ ಎಚ್ಚರಿಕೆ ನೀಡಲಾಗಿದೆ.
ಮಳೆ ಮತ್ತು ಪ್ರವಾಹದಿಂದ ಎದುರಾಗಬಹುದಾಗಿರುವ ಯಾವುದೇ ಸಂಭವನೀಯ ಅಪಾಯಗಳನ್ನು ಎದುರಿಸಲು ಜಿಲ್ಲಾಡಳಿತ ಮತ್ತು ಸ್ಥಳೀಯ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಗುರುಪುರ - ಪಲ್ಗುಣಿ ನದಿತೀರದ ಎರಡೂ ಬದಿಗಳ ಪ್ರದೇಶಗಳಲ್ಲಿ ವಾಸಿಸುವ ನಾಗರಿಕರು ತಕ್ಷಣದಿಂದಲೇ ತಮ್ಮ ಕುಟುಂಬದೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.