ಮಂಗಳೂರು,ಆ.10 (Daijiworld News/RD): ಶುಕ್ರವಾರ ರಾತ್ರಿ ತೊಕ್ಕೊಟ್ಟು ನೇತ್ರಾವತಿ ಸೇತುವೆಯಿಂದ ಹಾರಿದ ಯುವತಿಯ ಶವ ಶನಿವಾರ ಮುಂಜಾನೆ ಸೋಮೇಶ್ವರ ಬಟ್ಟಪ್ಪಾಡಿ ಸಮುದ್ರ ತೀರದಲ್ಲಿ ಶವ ಪತ್ತೆಯಾಗಿದೆ. ಈಕೆ ಪುತ್ತೂರು ಬಡಗನ್ನೂರು ಕೋಡಿಯಡ್ಕ ನಿವಾಸಿ ಗಜನೀಶ್ವರಿ ಕೆ.(24) ಎಂದು ಗುರುತಿಸಲಾಗಿದೆ.
ನಗರದ ಪ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಗಜನೀಶ್ವರಿ ನಾಪತ್ತೆಯಾಗಿದ್ದು,ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಉಳ್ಳಾಲ ಸೇತುವೆ ಬಳಿ ಬ್ಯಾಗ್, ಮೊಬೈಲ್, ಐಡಿ ಕಾರ್ಡ್ ಪತ್ತೆಯಾಗಿದ್ದು, ಈಕೆ ನಿನ್ನೆ ತಡರಾತ್ರಿ ನೇತ್ರಾವತಿ ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ. ಇದೀಗ ನದಿಗೆ ಹಾರಿದ ಯುವತಿಯ ಶವ ಸೋಮೇಶ್ವರ ಬಟ್ಟಪ್ಪಾಡಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
4 ದಿನಗಳ ಹಿಂದೆ ಆಗಸ್ಟ್ 4ರಂದು ನದಿಗೆ ಹಾರಿದ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ಕೊನೆಯ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿ ಈಜಿ ದಡ ಸೇರಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.