ಮಂಗಳೂರು, ಆ.10 (Daijiworld News/RD): ದಕ್ಷಿಣ ಕನ್ನಡದಲ್ಲಿ ಹರಿಯುವ ನೇತ್ರಾವತಿ, ಕುಮಾರಧಾರ, ಗುಂಡ್ಯ ಹೊಳೆಗಳು ತುಂಬಿ ತುಳುಕುತಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ನೇತ್ರಾವತಿ ನದಿ ಪಾತ್ರದ ಪ್ರದೇಶಗಳಾದ ಉಪ್ಪಿನಂಗಡಿ ಹಾಗೂ ಬಂಟ್ವಾಳದ ಹಲವು ಮನೆಗಳಿಗೆ ನೀರು ನುಗ್ಗಿದೆ. ಬಹುತೇಕ ನದಿತೀರದ ಪ್ರದೇಶಗಳೆಲ್ಲಾ ಜಲಾವೃತವಾಗಿದೆ. ರಾತ್ರಿ 11.30 ಕ್ಕೆ ಬಂದ ಮಾಹಿತಿಯ ಪ್ರಕಾರ ಉಪ್ಪಿನಂಗಡಿಯ ರಥ ಬೀದಿಯ ಬಹುತೇಕ ಮನೆಗಳನ್ನು ಎತ್ತರದ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಆ ಭಾಗದ ಜನರು ಮನೆ ಬಿಟ್ಟು ಸಂತೃಸ್ತರ ಶಿಬಿರ ಅಥವಾ ತಮ್ಮ ಬಂಧು ಮಿತ್ರರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ.
ಉಪ್ಪಿನಂಗಡಿಯಲ್ಲಿ ನೇತ್ರಾವತಿಯ ನದಿಯ ಅಪಾಯದ ಮಟ್ಟ 31.5 ಮೀ ಆಗಿದ್ದು ಆದರೆ ಇದು ರಾತ್ರಿ 10 ಗಂಟೆಯ ಸುಮಾರಿಗೆ ಈ ಮಟ್ಟ 31.9 ಮೀ ಆಗಿದೆ ಎನ್ನಲಾಗಿದೆ. ಕುಮಾರಧಾರ ನದಿಯ ಅಪಾಯ ಮಿತಿ 26.5 ಮೀ ಆಗಿದ್ದು ಅದು ಕೂಡ ಅಪಾಯದ ಮಟ್ಟ ಮೀರಿದೆ.
ನಿರಂತರವಾಗಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮುಂದಿನ 48 ಗಂಟೆಗಳ ಕಾಲ ರೆಡ್ ಅಲರ್ಟ್ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ 150ರಿಂದ 260 ಮಿ.ಮೀ. ಮಳೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಚಾರ್ಮಾಡಿ ಘಾಟ್ ಹಾಗೂ ಶಿರಾಡಿ ಘಾಟ್ ರಸ್ತೆಗಳು, ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣವಾಗಿ ಮುಚ್ಚಲ್ಪಟ್ಟಿವೆ. ಸಂಪಾಜೆ ಘಾಟ್ ತೆರೆದಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಮುಂದಿನ 48 ಗಂಟೆಗಳ ಕಾಲ ಜಿಲ್ಲೆಯಾದ್ಯಂತ ರೆಡ್ ಅಲೆರ್ಟ್ ಘೋಷಿಸಲಾಗಿದ್ದು, ಸಾರ್ವಜನಿಕರು ಎಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.