ಮಂಗಳೂರು, ಆ 10 (Daijiworld News/SM): ಯುವತಿಯೊಬ್ಬಳು ಸೇತುವೆ ಸಮೀಪದಿಂದ ನಾಪತ್ತೆಯಾಗಿರುವ ಘಟನೆ ತೊಕ್ಕೊಟ್ಟು ನೇತ್ರಾವತಿ ನದಿ ಸೇತುವೆಯಲ್ಲಿ ನಡೆದಿದೆ. ಪುತ್ತೂರು ಬಡಗನ್ನೂರು ಕೋಡಿಯಡ್ಕ ನಿವಾಸಿ ಗಜನೀಶ್ವರಿ ಕೆ.(24) ನಾಪತ್ತೆಯಾದ ಯುವತಿ.
ನಗರದ ಪ್ಲೈವುಡ್ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಗಜನೀಶ್ವರಿ ನಾಪತ್ತೆಯಾಗಿದ್ದು, ಸೇತುವೆ ಬಳಿ ಯುವತಿಯ ಬ್ಯಾಗ್, ಮೊಬೈಲ್, ಐಡಿ ಕಾರ್ಡ್ ಪತ್ತೆಯಾಗಿದೆ. ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಈಕೆ ಶುಕ್ರವಾರ ರಾತ್ರಿ 8ಗಂಟೆ ಸುಮಾರಿಗೆ ಉಳ್ಳಾಲ ಸೇತುವೆ ಬಳಿ ತನ್ನ ಬ್ಯಾಗ್, ಮೊಬೈಲ್ ಹಾಗೂ ಐಡಿ ಕಾರ್ಡೊಂದನ್ನು ಇಟ್ಟು ನಾಪತ್ತೆಯಾಗಿದ್ದಾಳೆ. ಈ ದಾರಿಯಾಗಿ ಹಾದು ಹೋಗುವವರು ಯುವತಿ ನದಿಗೆ ಹಾರಿದ ಬಗ್ಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಸ್ಪಷ್ಟತೆಯಿಲ್ಲ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. 4 ದಿನಗಳ ಹಿಂದೆ ಆಗಸ್ಟ್ 4ರಂದು ನದಿಗೆ ಹಾರಿದ ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ಕೊನೆಯ ಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿ ಈಜಿ ದಡ ಸೇರಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.