ಬಂಟ್ವಾಳ, ಆ 09 (Daijiworld News/SM): ತಾಲೂಕಿನಾದ್ಯಂತ ಕಳೆದ ಆರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಶುಕ್ರವಾರ ನೇತ್ರಾವತಿ ನದಿ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ. ಅಂದರೆ ಸಂಜೆಯ ಹೊತ್ತಿಗೆ 10.6 ಮೀ.ನಲ್ಲಿ ಹರಿಯುತ್ತಿದ್ದು, ಎಲ್ಲಿ ನೋಡಿದರಲ್ಲಿ ನೀರು ತುಂಬಿರುವ ದೃಶ್ಯ ಕಂಡು ಬಂದಿದೆ.
ನೆರೆಯಿಂದಾಗಿ ತಾಲೂಕಿನಲ್ಲಿ ಒಟ್ಟು 58 ಮನೆಗಳು, ಅಜಿಲಮೊಗರು, ಬರಿಮಾರು ಮಸೀದಿಯು ಜಲಾವೃತಗೊಂಡಿದೆ. ನಾವೂರು, ಅಜಿಲಮೊಗರು, ಕಡೇಶ್ವಾಲ್ಯ, ಬಂಟ್ವಾಳ ಸಮೀಪದ ಜಕ್ರಿಬೆಟ್ಟು, ಬಡ್ಡಕಟ್ಟೆ, ವಿ.ಪಿ.ರಸ್ತೆ, ಕಂಚಿಕಾರಪೇಟೆ, ಬಸ್ತಿಪಡ್ಪು, ಭಂಡಾರಿಬೆಟ್ಟು, ನಂದರಬೆಟ್ಟು, ತಲಪಾಡಿ, ಮೊದಲಾದೆಡೆ ನೀರಿನಿಂದ ಮನೆಗಳು ಜಲಾವೃತವಾಗಿದೆ.
ಇನ್ನು ನೆರೆ ನೀರಿನಿಂದಾಗಿ ಬರಿಮಾರು-ಬುಡೋಳಿ ಸಂಪರ್ಕ ರಸ್ತೆಯು ಮುಳುಗಡೆಯಾಗಿದೆ. ಬ್ರಹ್ಮರಕೊಟ್ಲು ಪ್ರದೇಶದಲ್ಲಿ ಕೃಷಿ ಭೂಮಿಗೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮನೆಗಳಲ್ಲದೆ, ತೋಟ, ಕೃಷಿ ಭೂಮಿಯು ಜಲಾವೃತಗೊಂಡಿದೆ. ಮುಳುಗಡೆ ಪ್ರದೇಶದ ಸುಮಾರು 300ಕ್ಕೂ ಹೆಚ್ಚು ಮಂದಿ ಸಂತ್ರಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ಅವರು ತಿಳಿಸಿದ್ದಾರೆ.
ಬಂಟ್ವಾಳ ಪ್ರವಾಸಿ ಮಂದಿರ, ಪಾಣೆಮಂಗಳೂರು ಪ್ರೌಢ ಶಾಲೆಯಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದೆ. ಕೆಲವರು ಗಂಜಿ ಕೇಂದ್ರದಲ್ಲಿ ಉಳಿದುಕೊಂಡರೆ, ಮತ್ತೆ ಕೆಲ ಸಂತ್ರಸ್ಥರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ನೇತ್ರಾವತಿಯಲ್ಲಿ ಇನ್ನಷ್ಟು ನೀರು ಏರಿಕೆಯಾದರೆ 41 ಮನೆಗಳು ಜಲಾವೃತವಾಗುವ ಭೀತಿಯಲ್ಲಿದ್ದು, ಈ ಮನೆಯ ಕುಟುಂಬಸ್ಥರು ಕೂಡ ಈಗಾಗಲೇ ಮನೆ ಖಾಲಿ ಮಾಡಿದ್ದಾರೆ.