ಚಾರ್ಮಾಡಿ, ಆ 09 (Daijiworld News/SM): ಕಳೆದ ಐದು ದಿನಗಳಿಂದ ನಿರಂತರವಾಗಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿಯಲ್ಲಿ ಹಲವು ಕಡೆಗಳಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಕೆಲವು ಕಡೆಗಳಲ್ಲಿ ಹೆದ್ದಾರಿಗೆ ಮರಗಳು ಉರುಳಿ ಬಿದ್ದಿವೆ. ಮಳೆ ಮುಂದುವರೆದಿರುವ ಕಾರಣ ಮತ್ತಷ್ಟು ಭೂ ಕುಸಿತವಾಗುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಚಾರ್ಮಾಡಿಯಲ್ಲಿ ಆಗಸ್ಟ್ 12ರ ತನಕ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಮಂಗಳೂರಿನಿಂದ ಚಿಕ್ಕಮಗಳೂರು ಮೂಲಕ ಬೆಂಗಳೂರು ಸಂಪರ್ಕಿಸುವ ಚಾರ್ಮಾಡಿ ರಸ್ತೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಗುಡ್ಡ ಕುಸಿತವಾಗುತ್ತಿದೆ. ಪರಿಣಾಮ ರಸ್ತೆ ಸಂಪರ್ಕಕ್ಕೆ ತಡೆಯುಂಟಾಗಿದೆ. ಈ ಭಾಗದ ಪರಿಸ್ಥಿತಿಯನ್ನು ಅವಲೋಕಿಸಿದ ಜಿಲ್ಲಾಧಿಕಾರಿಗಳು ಅಪಾಯದ ಮುನ್ಸೂಚನೆ ಇರುವ ಕಾರಣದಿಂದಾಗಿ ಈ ಭಾಗದಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಇನ್ನು ಘಾಟ್ ರಸ್ತೆಯಲ್ಲಿ ಸುಮಾರು 10 ಜೆಸಿಬಿಗಳು ಮಣ್ಣು ತೆರವು ಕಾರ್ಯಾಚರಣೆ ನಡೆಸುತ್ತಿವೆ. ರಸ್ತೆ ಮೇಲೆ ಬಿದ್ದದ್ದ ಮಣ್ಣು ತೆರವು ಕಾರ್ಯ ನಿರಂತರವಾಗಿ ಮುಂದುವರೆದಿದೆ. ಇನ್ನು ಶಿರಾಡಿಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ.