ಮಂಗಳೂರು, ಆ 09 (Daijiworld News/MSP): ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುತ್ತಾರೆ. ಹಲವರಿಗೆ ಸೋಶಿಯಲ್ ಮೀಡಿಯಾ ಎಂಬುದು ಅವಿಭಾಜ್ಯ ಅಂಗವಾಗಿದೆ. ಪ್ರತಿಯೊಂದು ಸುದ್ದಿಯೂ ಮೊದಲು ಜನರ ಬಳಿಗೆ ತಲುಪುದು ಮೊಬೈಲ್ ಗಳಲ್ಲಿರುವ ಸಾಮಾಜಿಕ ಜಾಲತಾಣದ ಮೂಲಕ ಎನ್ನುವ ಪರಿಸ್ಥಿತಿ ಬಂದಿದೆ.
ಸೋಶಿಯಲ್ ಮೀಡಿಯಗಳಿಂದ ದೂರವೇ ಉಳಿದಿದ್ದ ದಕ್ಷಿಣ ಕನ್ನಡ ಜಿಲ್ಲಾಡಳಿತ ಇದೀಗ ತಮ್ಮ ಅಧಿಕೃತ ಖಾತೆ ತೆರೆದು ಜನರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ತಡವಾಗಿಯಾದರೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಟ್ವಿಟರ್ ಗೆ ಎಂಟ್ರಿ ಕೊಟ್ಟಿದ್ದಾರೆ.
'ಡಿಸಿ ದಕ್ಷಿಣ ಕನ್ನಡ' ಎಂಬ ಹೆಸರಿನಲ್ಲಿ ಟ್ವಿಟರ್ ನಲ್ಲಿ ಅಧಿಕೃತವಾಗಿ ಅಕೌಂಟ್ ತೆರೆದಿದ್ದು ಅಗತ್ಯ ಮಾಹಿತಿಗಳನ್ನು ಹಂಚಿಕೊಳ್ಳತೊಡಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಗಳನ್ನು ಇಲ್ಲಿ ಶೇರ್ ಮಾಡಲಾಗುತ್ತದೆ.
ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಳೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಶಾಲಾ - ಕಾಲೇಜುಗಳಿಗೆ ರಜೆ ಘೋಷಿಸಿದ ಪ್ರಕಟನೆಯಲ್ಲಿ ದಿನಾಂಕವನ್ನು ಕಿಡಿಗೇಡಿಗಳು ತಿರುಚಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದ್ದರು. ಸದ್ಯ ಜಿಲ್ಲಾಡಳಿತ ನೀಡುವ ಅಧಿಕೃತ ಮಾಹಿತಿಗಳೆಲ್ಲವೂ ಟ್ವಿಟರ್ ನಲ್ಲಿ ಲಭ್ಯವಾಗಲಿರುವುದರಿಂದ ಇಂತಹ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವೂ ಇರಬಹುದು.