ಮಂಗಳೂರು,ಆ.09 (Daijiworld News/RD): ಶ್ರಾವಣ ಮಾಸದ ಎರಡನೇ ಶುಕ್ರವಾರವಾದಂದು ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸುವ ಸಂಪ್ರದಾಯ. ಇಂದು ವರಮಹಾಲಕ್ಷ್ಮಿ ಹಬ್ಬವಾದ್ದರಿಂದ ಎಲ್ಲೆಡೆ ದೇವಸ್ಥಾನಗಳಲ್ಲಿ ಸಾಮೂಹಿಕ ಪೂಜೆ ಹಾಗೂ ಮನೆಗಳಲ್ಲಿಯೂ ವರಮಹಾಲಕ್ಷ್ಮಿ ವೃತವನ್ನು ಆಚರಿಸಲಾಯಿತು. ಕರಾವಳಿಯಾದ್ಯಂತ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಪೂಜೆ ನೆರವೇರುವ ಮೂಲಕ ಶ್ರದ್ಧೆ ಭಕ್ತಿ ಭಾವದಿಂದ ವೃತವನ್ನು ಆಚರಿಸಲಾಯಿತು.
ಹೆಂಗಳೆಯರಿಗೆ ಅಚ್ಚುಮೆಚ್ಚಿನ ಹಬ್ಬ ವರಮಹಾಲಕ್ಷ್ಮೀ ವೃತ ಪೂಜೆಯಾಗಿದ್ದು, ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಭಾಗಿಯಾದರು. ಇನ್ನು ಮನೆಯಲ್ಲಿ ಗಮನಿಸಿದರೆ ಹೆಂಗಸರು ವರಮಹಾಲಕ್ಷ್ಮಿ ವೃತವನ್ನು ವಿಶೇಷವಾಗಿ ಆಚರಿಸುತ್ತಾರೆ. ಮನೆಯಲ್ಲಿ ವರಮಹಾಲಕ್ಷ್ಮಿ ಮೂರ್ತಿಯನ್ನಿಟ್ಟು ಅದಕ್ಕೆ ಸೀರೆ, ತಾಳಿ, ಬಂಗಾರದ ಆಭರಣ, ಹೂಗಳಿಂದ ಅಲಂಕರಿಸಿ, ನೈವೇದ್ಯ ಮಾಡಿ ಸಂಜೆ ಮುತ್ತೈದೆಯರನ್ನು ಆಮಂತ್ರಿಸಿ ಅರಿಶಿಣ, ಕುಂಕುಮ, ಹೂವು, ಹಣ್ಣು ಕೊಡುವುದರ ಮೂಲಕ ಮುತ್ತೈದೆಯರಲ್ಲಿ ಲಕ್ಷ್ಮೀ ರೂಪವನ್ನು ಕಾಣುತ್ತಾರೆ.
ಮಂಗಳೂರು ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಕಡೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ಇಂದು ನಡೆದಿದ್ದು, ನಗರದ ಮಂಗಳಾದೇವಿ ದೇವಸ್ಥಾನ, ಉರ್ವ ಮಾರಿಗುಡಿ, ಹಾಗೂ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಸೇರಿದಂತೆ ಹಲವೆಡೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ ನೆರವೇರಿತು.