ಕಾಸರಗೋಡು ಡಿ 19 : ಮಹಿಳೆಯ ಚಿನ್ನದ ಸರವನ್ನು ಕಳವುಗೈದಿದೆ ಎಂಬ ಸಂಶಯದ ಮೇರೆಗೆ ಕಾರ್ಯಪ್ರವೃತ್ತರಾದ ಕಾಸರಗೋಡು ಪೊಲೀಸರು ತಪಾಸಣೆ ನಡೆಸಿದಾಗ ಸಾಮಾಗ್ರಿ ಒಳಗೊಂಡ ಗೋಣಿ ಚೀಲವನ್ನು ಬಿಟ್ಟು ಅಲೆಮಾರಿ ತಂಡ ಪರಾರಿಯಾದ ಘಟನೆ ಡಿ19 ರ ಮಂಗಳವಾರ ಬೆಳಿಗ್ಗೆ ಕಾಸರಗೋಡು ನಗರದಲ್ಲಿ ನಡೆದಿದೆ. ಸಾಮಗ್ರಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ತಪಾಸಣೆ ನಡೆಸುತ್ತಿದ್ದಾರೆ. ಈ ವಸ್ತುಗಳು ಕಳವು ಮಾಡಿದ್ದಿರಬಹುದು ಎಂದು ಶಂಕಿಸಲಾಗಿದೆ. ನಗರದ ಮೀನು ಮಾರುಕಟ್ಟೆ ರಸ್ತೆಯಲ್ಲಿ ಮಹಿಳೆಯ ಚಿನ್ನದ ಸರವನ್ನು ಇಂದು ಬೆಳಿಗ್ಗೆ ಅಲೆಮಾರಿ ತಂಡವೊಂದು ಎಗರಿಸಿ ಪರಾರಿಯಾಗಿತ್ತು.
ಈ ಬಗ್ಗೆ ದೂರು ಲಭಿಸಿದ ಹಿನ್ನಲೆಯಲ್ಲಿ ಪೊಲೀಸರು ನಗರದಲ್ಲಿ ಅಲೆಮಾರಿ ತಂಡವನ್ನು ತಪಾಸಣೆ ನಡೆಸಿದ್ದು, ಅವರ ಸಾಮಾಗ್ರಿ ಹಾಗೂ ಇತರ ವಸ್ತುಗಳನ್ನು ತಪಾಸಣೆ ನಡೆಸಲಾಗಿತ್ತು. ಈ ನಡುವೆ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಅಲೆಮಾರಿ ಮಹಿಳೆಯರನ್ನು ವಿಚಾರಿಸಿ ಅವರ ಬಳಿ ಇದ್ದ ವಸ್ತು ಗಳನ್ನು ತಪಾಸಣೆ ಗೊಳಪಡಿಸುತ್ತಿದಂತೆ ಪೊಲೀಸರನ್ನು ತಪ್ಪಿಸಿ ಅಲೆಮಾರಿ ತಂಡವು ಪರಾರಿಯಾಗಿದೆ.
ಬಳಿಕ ಇವರಿಗಾಗಿ ನಗರ ಹಾಗೂ ಹೊರವಲಯದಲ್ಲಿ ಹುಡುಕಾಟ ನಡೆಸಿದರೂ ಅಲೆಮಾರಿ ತಂಡ ಪರಾರಿಯಾಗಿತ್ತು. ಕಾಸರಗೋಡು ಹಾಗೂ ಜಿಲ್ಲೆಯ ಇತರ ಕಡೆಗಳಲ್ಲಿ ಅಲೆಮಾರಿ ಮಹಿಳೆಯರು ಬೀಡು ಬಿಟ್ಟಿದ್ದು , ಚಿನ್ನಾಭರಣ ,ಹಣ ಕಳವು ಪ್ರಕರಣಗಳಲ್ಲಿ ಶಾಮೀಲಾಗಿದ್ದಾರೆ. ಬಸ್ಸು , ಜನದಟ್ಟಣೆ ಪ್ರದೇಶ , ಮಾರುಕಟ್ಟೆ , ಒಬ್ಬಂಟಿಯಾಗಿ ತೆರಳುವ ಸಂದರ್ಭದಲ್ಲಿ ಈ ಜಾಲವು ಕಳವು ನಡೆಸುತ್ತಿದ್ದು , ಹಲವು ದೂರುಗಳು ಲಭಿಸುತ್ತಿದೆ . ಘಟನೆ ನಡೆದ ತಕ್ಷಣ ಪೊಲೀಸರು ಕಾರ್ಯಾಚರಣೆ ನಡೆಸಿದ್ದು , ಈ ನಡುವೆ ತಮ್ಮ ಬಳಿ ಇದ್ದ ವಸ್ತುಗಳನ್ನು ತಂಡವು ಪರಾರಿಯಾಗಿರುವುದು ಈ ತಂಡ ಕೃತ್ಯಗಳಲ್ಲಿ ನೇರವಾಗಿ ಶಾಮೀಲಾಗಿರುವ ಸಾಧ್ಯತೆ ಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.