ಮಂಗಳೂರು,ಆ.09 (Daijiworld News/RD): ಭಗ್ನ ಪ್ರೇಮಿಯಿಂದ ಚೂರಿ ಇರಿತಕ್ಕೆ ಒಳಗಾಗಿದ್ದ ವಿದ್ಯಾರ್ಥಿನಿ ಬಗಂಬಿಲ ನಿವಾಸಿ ಧೀಕ್ಷಾ(22) ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಇದೀಗ ಆರೋಗ್ಯದ ಏರುಪೇರಿನಿಂದ ಮತ್ತೆ ಆಸ್ಪತ್ರಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಘಟನೆ ನಡೆದ 25 ದಿನಗಳ ಬಳಿಕ ದೀಕ್ಷಾ ಆರೋಗ್ಯ ಸ್ಥಿತಿಯಲ್ಲಿ ಬಹಳಷ್ಟು ಸುಧಾರಣೆಯಾಗಿ, ವಾರ್ಡಿಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಆಗಸ್ಟ್ 3 ರಂದು ಮನೆಗೆ ಕರೆದುಕೊಂಡು ಹೋಗಲಾಯಿತು. ಎರಡು ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರಾದ ಕಾರಣ ಮತ್ತೆ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ. ಸದ್ಯ ಆಹಾರವನ್ನು ಸೇವಿಸುತ್ತಿದ್ದಾಳೆ, ಮಾತನಾಡುವಷ್ಟು ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ದೇರಳಕಟ್ಟೆ ಬಳಿ ಜೂನ್ 29 ರಂದು ಶಕ್ತಿನಗರ ನಿವಾಸಿ ಸುಶಾಂತ್ ಎಂಬ ಯುವಕ, ದೀಕ್ಷಾ ತನ್ನ ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಆಕೆಗೆ 12 ಬಾರಿ ನಡು ರಸ್ತೆಯಲ್ಲಿ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದ. ಬಳಿಕ ತನ್ನ ಕುತ್ತಿಗೆ ಭಾಗಕ್ಕೆ ಇರಿದು ಆತ್ಮಹತ್ಯೆಗೆ ಯತ್ನಿಸಿದ್ದ. ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನು ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುಶಾಂತ್ ಎರಡೇ ದಿನದಲ್ಲಿ ಚೇತರಿಸಿಕೊಂಡಿದ್ದು, ಉಳ್ಳಾಲ ಪೊಲೀಸರು ಸಂಪೂರ್ಣ ಚೇತರಿಸಿಕೊಂಡ ಎಂಟು ದಿನಗಳ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ , ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.