ಮಂಗಳೂರು, ಆ 08 (DaijiworldNews/SM): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಆಗಸ್ಟ್ 9ರ ಶುಕ್ರವಾರದಂದು ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೊಷಣೆ ಮಾಡಲಾಗಿದೆ. ಸುರಕ್ಷತೆಯ ದೃಷ್ಠಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಸೋಮವಾರದಿಂದ ಕರಾವಳಿ ಭಾಗದಲ್ಲಿ ಬಿರುಸಿನಿಂದ ಮಳೆ ಸುರಿಯುತ್ತಿದೆ. ಬುಧವಾರ ರಾತ್ರಿ ಭಾರೀ ಗಾಳಿ ಮಳೆ ಸುರಿದಿದೆ. ಆದರೆ, ಗುರುವಾರದಂದು ಒಂದಿಷ್ಟು ಬಿಡುವನ್ನು ಪಡೆದುಕೊಂಡಿತ್ತು. ಇನ್ನು ಭಾರೀ ಮಳೆಯಿಂದಾಗಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು, ಎಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿದೆ.
ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಲ್ಲಿ ಆಗಸ್ಟ್ 9ರ ತನಕ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ಶುಕ್ರವಾರ ಕೂಡ ರಜೆ ಘೋಷಿಸಲಾಗಿದೆ.
ಅಂಗನವಾಡಿಯಿಂದ ಹಿಡಿದು ಸ್ನಾತಕೋತ್ತರ ಪದವಿ ತರಗತಿಗಳ ತನಕ ರಜೆ ಘೋಷಣೆ ಮಾಡಲಾಗಿದೆ.