ಬಂಟ್ವಾಳ, ಆ 08 (DaijiworldNews/SM): ಬುಧವಾರ ರಾತ್ರಿಯಿಂದ ಗುರುವಾರದವರೆಗೆ ಬಂಟ್ವಾಳ ಪರಿಸರದಲ್ಲಿ ಭಾರಿ ಮಳೆಯಾದ ಕಾರಣ ನೇತ್ರಾವತಿ ನದಿ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಸಹಾಯಕ ಕಮೀಷನರ್ ರವಿಚಂದ್ರ ನಾಯಕ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ನೇತೃತ್ವದ ತಂಡ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನದಿ ನೀರಿನ ಮಟ್ಟ ಬೆಳಗ್ಗಿನಿಂದಲೇ ಏರಿಳಿತ ಕಾಣುತ್ತಿದ್ದು, ಮಧ್ಯಾಹ್ನದ ವೇಳೆಗೆ ಅಪಾಯದ ಮಟ್ಟ ಮೀರಿತ್ತು. ಇದೀಗ ನೇತ್ರಾವತಿ ಮಟ್ಟ 8.7 ಮೀಟರ್ ಇದ್ದು, ಪಾಣೆಮಂಗಳೂರು, ಬಂಟ್ವಾಳದ ತೀರ ಪ್ರದೇಶಗಳಲ್ಲಿ ನೀರು ಪ್ರವೇಶಿಸಿದೆ. ನದಿ ತೀರದ ಕೆಲವು ಮನೆ, ಅಂಗಡಿಗಳಿಗೂ ನೀರು ನುಗ್ಗಿದೆ. ಇನ್ನು ಪ್ರದೇಶದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಅಧಿಕಾರಿಗಳಾದ ಶಿವಣ್ಣ ಕನವಾರ್, ಪಾಣೆಮಂಗಳೂರು ಹೋಬಳಿ ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಯಶೋಧಾ ಪಾಣೆಮಂಗಳೂರು ಮತ್ತಿತರರು ಅಧಿಕಾರಿಗಳ ಭೇಟಿ ಸಂದರ್ಭ ಜೊತೆಗಿದ್ದರು.