ಬೆಳ್ತಂಗಡಿ, ಆ 08 (Daijiworld News/MSP): ಕಳೆದ ನಾಲ್ಕು ದಿನಗಳಿಂದ ಸತತವಾಗಿ ಸುರಿದ ಮಳೆಯಿಂದಾಗಿ ತಾಲೂಕಿನ ನದಿ,ತೊರೆ,ಹಳ್ಳ,ಕೊಳ್ಳಗಳು ಉಕ್ಕಿ ಹರಿಯುತ್ತಿರುವುದು ಒಂದೆಡೆಯಾದರೆ ಇನ್ನೊಂದೆಡೆ ಚಿಕಮಗಳೂರು-ಮಂಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಕಣಿವೆ ರಸ್ತೆಯಲ್ಲಿ ಭಾರೀ ಗುಡ್ಡ ಕುಸಿತದಿಂದಾಗಿ ರಸ್ತೆ ಸಂಪರ್ಕಕ್ಕೆ ತಡೆಯುಂಟಾಗಿದೆ. ಇಲ್ಲಿನ ಪರಿಸ್ಥಿತಿ ನೋಡಿ ಜಿಲ್ಲಾಧಿಕಾರಿಯವರು ಗುರುವಾರದವರೆಗೆ ವಾಹನ ಸಂಚಾರವನ್ನು ನಿಷೇಧಿಸಿದ್ದರು.
ಗುರುವಾರವೂ ಸುಮಾರು 5 ಜೆಸಿಬಿ ಹಾಗೂ ಹಿಟಾಚಿಗಳಿಂದ ರಸ್ತೆ ಮೇಲೆ ಬಿದ್ದದ್ದ ಮಣ್ಣು ತೆರೆಯುವ ಕಾರ್ಯ ನಿರಂತರವಾಗಿ ನಡೆಯಿತು. ಗುರುವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಕಾಮಗಾರಿ ಸ್ವಲ್ಪ ಅನುಕೂಲವಾಗಿತ್ತು. ಶುಕ್ರವಾರದಿಂದ ಪ್ರಯಾಣಕ್ಕೆ ಅವಕಾಶಕೊಡುವ ಸಾಧ್ಯತೆಯಿದೆ. ಕೆಲವೊಂದು ಪ್ರದೇಶದಲ್ಲಿ ಮಣ್ಣು ತೆಗೆಯುತ್ತಿದ್ದಂತೆ ಮತ್ತೆ ಮತ್ತೆ ಗುಡ್ಡ ಕುಸಿಯುತ್ತಿದ್ದು, ಇನ್ನೂ ಅಧಿಕ ಮಳೆ ಬಂದರೆ ಮತ್ತೆ ಕುಸಿಯುವ ಸಾಧ್ಯತೆ ಇದೆ. ಆದರೆ ತಾತ್ಕಾಲಿಕವಾಗಿ ರಸ್ತೆಗೆ ಬಿದ್ದಿರುವ ಮಣ್ಣುಗಳ ತೆರವು ಕಾರ್ಯ ಬಹುತೇಕ ಪೂರ್ಣಗೊಂಡಿದೆ.
ಘಾಟಿಯ ಸಕಲೇಶಪುರ ವ್ಯಾಪ್ತಿಯಲ್ಲಿ ಭಾರಿ ಗಾತ್ರದಲ್ಲಿ ಮಣ್ಣು ಕುಸಿಯುವ ಲಕ್ಷಣ ಕಾಣುತ್ತಿದೆ. ತಹಸೀಲ್ದಾರ್ ಗಣಪತಿ ಶಾಸ್ತ್ರಿ, ಅರಣ್ಯ ಇಲಾಖಾಧಿಕಾರಿಗಳ ತಂಡ, ಮೆಸ್ಕಾಂ ಅಧಿಕಾರಿವರ್ಗದವರು, ಸಿಬ್ಬಂದಿವರ್ಗದವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಉಳಿದಂತೆ ತೋಟತ್ತಾಡಿ ಬಳಿ ಕೆಲವೊಂದು ಡ್ಯಾಮ್ಗಳಲ್ಲಿ ಅಪಾಯಕಾರಿ ಮರಗಳು ಬಿದ್ದಿರುವ ಮಾಹಿತಿ ಇದೆ. ಇದರ ಜೊತೆಗೆ ಅಲ್ಲಿಯೇ ಮರಗಳು ಮೆಸ್ಕಾಂ ತಂತಿಗಳಿಗೆ ಬಿದ್ದಿರುವುದರಿಂದ ಅಪಾರ ಹಾನಿಯಾಗಿದೆ. ತೋಟತ್ತಾಡಿ ಬಳಿ ನಾಲ್ಕು ಮನೆಗಳಿಗೆ ಮರಗಳು ಬಿದ್ದಿರುವುದರಿಂದ ಭಾಗಶಃ ಹಾನಿಯಾಗಿದೆ.