ಮಂಗಳೂರು,ಆ. 08 (Daijiworld News/RD): ಜುಲೈ ತಿಂಗಳ 19 ರಿಂದ 29 ರವರೆಗೆ ಥಾಯೈಲೆಂಡಿನ ಬ್ಯಾಂಕಾಕಿನಲ್ಲಿ ಇಂಟರ್ ನ್ಯಾಷನಲ್ ಫೆಡೆರೇಶನ್ ಆಫ್ ಮೊತೈ ಅಮೆಚೂರ್ ವತಿಯಿಂದ ಜರಗಿದ್ದ ಸೀನಿಯರ್ ವರ್ಲ್ಡ್ ಮೊತೈ ಚಾಂಪಿಯನ್ಶಿಪ್ 2019, 57 ಕೆ.ಜಿ.ವಿಭಾಗದಲ್ಲಿ ಸುರತ್ಕಲ್ನ ಅನ್ವಿತಾ ಆಳ್ವ ಅವರು ಕಂಚಿನ ಪದಕ ವಿಜೇತರಾಗಿದ್ದಾರೆ. ಅನ್ವಿತಾ ಆಳ್ವ ಕ್ರೀಡೆಯಲ್ಲಿ ಭಾರತವನ್ನು ಪ್ರತಿನಿಧಿಸಿಧ್ದ ಮಂಗಳೂರಿನ ಪ್ರಥಮ ಮಹಿಳೆಯಾಗಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜಯರಾಮ ಆಳ್ವ ಮತ್ತು ಶುಭವತಿ ದಂಪತಿಯ ಪುತ್ರಿಯಾಗಿರುವ ಅನ್ವಿತಾ ಆಳ್ವಾ, ನಿತೇಶ್ಚಂದ್ರ ಕುಮಾರ್ ಅವರಿಂದ ತರಬೇತಿ ಪಡೆದುಕೊಂಡಿದ್ದರು. ಈಕೆ ಮಂಗಳೂರಿನ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಅಂಡ್ ಇಲೆಕ್ಟ್ರೋನಿಕ್ಸ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.
ವಿಶ್ವ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಒಟ್ಟು102 ರಾಷ್ಟ್ರಗಳ ಸ್ಪರ್ಧಿಗಳು ಪಾಲ್ಗೊಂಡಿದ್ದ ಇವರು ಮೂರು ಬಾರಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಾಂಪಿಯನ್ ವಿಜೇತರಾಗಿದ್ದಾರೆ. ವಿಶ್ವ ಚಾಂಪಿಯನ್ಶಿಪ್ಗೆ ಅನಿವಾಸಿ ಉದ್ಯಮಿ, ಕೊಡುಗೈ ದಾನಿ ರೊನಾಲ್ಡ್ ಕುಲಾಸೋ ಮತ್ತು ಇತರರು ತನಗೆ ನೆರವು ನೀಡಿದ್ದ ಕಾರಣ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ದಾಯ್ಜಿವರ್ಲ್ಡ್ ಜೊತೆಗೆ ತನ್ನ ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಇವರಿಗೆ ಜಾಗತಿಕವಾಗಿ ಬಂಟರ ಸಂಘಗಳ ಒಕ್ಕೂಟ, ಬಂಟರ ಯಾನೆ ನಾಡವರ ಮಾತೃ ಸಂಘ, ಇಂಟರ್ ನ್ಯಾಷನಲ್ ಬಂಟರ ಸಂಘ ಹಾಗೂ ಸುರತ್ಕಲ್ ಬಂಟರ ಸಂಘ ಹಾಗೂ ಸುರತ್ಕಲ್ ಬಂಟರ ಸಂಘ, ಕಾವೂರು ಬಂಟರ ಸಂಘ, ಆಸರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಹಾಯ ನೀಡಿ ಶುಭ ಹಾರೈಸಿದ್ದಾರೆ.