ಉಳ್ಳಾಲ,ಆ. 08 (Daijiworld News/RD): ನೇತ್ರಾವತಿ ನದಿಗೆ ಹಸುವಿನ ಶವವನ್ನು ಎಸೆದಿರುವ ಘಟನೆ ಉಳ್ಳಾಲ ಉಳಿಯದಲ್ಲಿ ಬುಧವಾರ ಸಂಜೆ ಬೆಳಕಿಗೆ ಬಂದಿದೆ. ಘಟನೆಯಿಂದ ಉಳ್ಳಾಲ ಉಳಿಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ, ಉಳಿಯ ನಾಗರಿಕರು ಹಸುವಿನ ಶವವನ್ನು ಉಳ್ಳಾಲ ನಗರಸಭೆ ಎದುರುಗಡೆ ಜೆಸಿಬಿ ಮೂಲಕ ತಂದಿರಿಸಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.
ಘಟನೆಯ ವಿವರ
ಉಳ್ಳಾಲ ಉಳಿಯ ದೇವಸ್ಥಾನ ಸಮೀಪ ಇರುವ ದೇವಸ್ಥಾನದ ಬಳಿ, ಗುರಿಕಾರ ರಾಜೇಶ್ ಎಂಬವರ ಮನೆ ಸಮೀಪ ದೊಡ್ಡ ಗಾತ್ರದ ಹಸುವಿನ ಮೃತದೇಹ ತೇಲಿಬಂದಿತ್ತು. ಮನೆಮಂದಿಗೆ ದುರ್ವಾಸನೆ ಎದುರಾದಾಗ ನದಿ ತೀರಕ್ಕೆ ತೆರಳಿದಾಗ ಹಸುವಿನ ದೇಹ ಕಂಡುಬಂದಿತ್ತು. ಕೂಡಲೇ ಅವರು ಉಳ್ಳಾಲ ನಗರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಹಸುವಿನ ಮೃತದೇಹವನ್ನು ತೆರವುಗೊಳಿಸುವಂತೆ ಸೂಚಿಸಿದ್ದಾರೆ.
ಸ್ಥಳಕ್ಕಾಗಮಿಸಿದ ನಗರಸಭೆ ಅಧಿಕಾರಿಗಳು ಶವವನ್ನು ಮೇಲಕ್ಕೆತ್ತಲು ಅಸಾಧ್ಯ, ಅದನ್ನು ದೂರ ದೂಡಿ ಬಿಡುವ ಕೆಲಸವನ್ನು ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಉಳ್ಳಾಲ ಉಳಿಯ ನಾಗರಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಉಳಿಯ ನಿವಾಸಿಗಳೇ ಸೇರಿಕೊಂಡು ಜೆಸಿಬಿ ಮೂಲಕ ಹಸುವಿನ ದೇಹವನ್ನು ಮೇಲಕ್ಕೆತ್ತಿ ಉಳ್ಳಾಲ ನಗರಸಭೆ ಕಟ್ಟಡದ ಎದುರುಗಡೆ ಕೊಂಡೊಯ್ದು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟಿಸಿದ್ದಾರೆ.
ಈ ವೇಳೆ ಸ್ಥಳದಲ್ಲಿದ್ದ ದೇವಸ್ಥಾನದ ಗುರಿಕಾರರಾದ ರಾಜೇಶ್ ಅವರು ಮಾತನಾಡಿ ‘ ಜನವಸತಿ ಪ್ರದೇಶ ಉಳಿಯ ಪ್ರದೇಶ ನೇತ್ರಾವತಿ ನದಿ ತೀರದಲ್ಲಿದೆ. ನಿರಂತರವಾಗಿ ನದಿಯ ಒಂದು ಭಾಗದ ನಿವಾಸಿಗಳಿಂದ ನದಿಯನ್ನು ಮಲಿನಗೊಳಿಸುವ ಕೆಲಸವಾಗುತ್ತಲೇ ಇದೆ. ಈ ಕುರಿತು ಸ್ಥಳೀಯ ಶಾಸಕರು ಹಾಗೂ ನಗರಸಭೆಗೆ ದೂರು ನೀಡುತ್ತಲೇ ಬಂದಿದ್ದೇವೆ. ಆದರೆ ಸಮಸ್ಯೆಗೆ ಪರಿಹಾರವೇ ದೊರೆತಿಲ್ಲ. ಪ್ರಮುಖವಾಗಿ ನದಿಗೆ ಜೋಡಣೆಯಾಗಿರುವ ಮನೆಯೊಂದನ್ನು ಅನಧಿಕೃತ ಕಸಾಯಿಖಾನೆಯಾಗಿ ಪರಿವರ್ತನೆಗೊಳಿಸಲಾಗಿದೆ. ಮನೆಯಲ್ಲಿ ನಸುಕಿನ ಜಾವ ಜಾನುವಾರುಗಳನ್ನು ಕಡಿದು ಅದರ ತ್ಯಾಜ್ಯವನ್ನು ನೇರವಾಗಿ ನದಿಗೆ ಎಸೆಯಲಾಗುತ್ತಿದೆ. ತ್ಯಾಜ್ಯ ನೇರವಾಗಿ ನದಿಗೆ ಹೋಗುವಂತೆಯೂ ವ್ಯವಸ್ಥೆ ಮಾಡಲಾಗಿದೆ.
ಈ ಕುರಿತ ವೀಡಿಯೋ ಸಮೇತ ದೂರು ಕೊಟ್ಟರೂ, ಯಾವುದೇ ರೀತಿಯ ಸ್ಪಂಧನೆ ಸಿಕ್ಕಿಲ್ಲ. ಇದರ ಪರಿಣಾಮವಾಗಿ ಮಾಂಸ ಮಾಡಲೆಂದು ತಂದ ಹಸು ಕಡಿಯುವ ಮುನ್ನವೇ ಮೃತಪಟ್ಟಿದೆ. ಅದಕ್ಕಾಗಿ ಕಸಾಯಿಖಾನೆಯವರು ನೇರವಾಗಿ ಹಸುವಿನ ಶವವನ್ನು ನದಿಗೆ ಎಸೆದಿದ್ದಾರೆ. ಇದು ಮುಂದುವರಿದಲ್ಲಿ ಈಗಾಗಲೇ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗಗಳು ಬಂದಿವೆ. ಮುಂದೆ ಇನ್ನಷ್ಟು ರೋಗ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ, ಜತೆಗೆ ಕಾರಣೀಕ ಕ್ಷೇತ್ರವಾಗಿರುವ ಉಳಿಯ ದೈವಸ್ಥಾನದಲ್ಲಿ ಸಮೀಪವೇ ಇಂತಹ ಕುಕೃತ್ಯಗಳು ನಡೆಯುತ್ತಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಉಗ್ರ ರೀತಿಯಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಪ್ರತಿಭಟನೆ ವೇಳೆ ಸುರೇಶ್ ಕೊಪ್ಪಳ, ದೇವ್ ಕಿಶನ್, ಕಮಲಾಕ್ಷ್ ಮಂಜನಕುದ್ರು ಉಪಸ್ಥಿತರಿದ್ದರು.