ಉಡುಪಿ,ಆ. 08 (Daijiworld News/RD): ಕಳೆದ ವರ್ಷ ಆಕಸ್ಮಿಕವಾಗಿ ಅನಾರೋಗ್ಯಗೊಂಡು ಅಗಲಿದ ಶೀರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಪ್ರಥಮ ಆರಾಧನೋತ್ಸವವು ಶೀರೂರು ಮೂಲ ಮಠದಲ್ಲಿರುವ ವೃಂದಾವನ ಸನ್ನಿಧಿಯಲ್ಲಿ ಬುಧವಾರ ಜರುಗಿತು.
ದ್ವಂದ್ವ ಮಠ ಶ್ರೀ ಸೋದೆ ಮಠಾಧೀಶರ ಮಾರ್ಗದರ್ಶನದಲ್ಲಿ ಸೋದೆ ಮಠದ ದಿವಾನರಾದ ಪಾಡಿಗಾರು ವಾಸುದೇವ ತಂತ್ರಿ ಹಾಗೂ ಲಕ್ಷ್ಮೀನರಾಯಣ ತಂತ್ರಿಗಳ ನೇತೃತ್ವದ ವೈದಿಕರಿಂದ ಬೆಳಿಗ್ಗೆ ಶೀರೂರುಮಠದ ಪಟ್ಟದ ದೇವರಾದ ಶ್ರೀ ವಿಠಲ ದೇವರು , ಶ್ರೀರಾಮದೇವರು ಹಾಗೂ ಮುಖ್ಯಪ್ರಾಣ ದೇವರಿಗೆ ವಿಶೇಷ ಅಭಿಷೇಕ ಹಾಗೂ ಮಹಾಪೂಜೆ ನೆರವೇರಿಸಲಾಯಿತು. ಶೀರೂರು ಶ್ರೀಗಳ ವೃಂದಾವನ ಸನ್ನಿಧಿಯಲ್ಲಿ ಪವಮಾನಹೋಮ ವಿರಜಾ ಹೋಮ ನಡೆಯಿತು. ಬಳಿಕ ನೂತನವಾಗಿ ನಿರ್ಮಿಸಲಾದ ಶಿಲಾಮಯ ವೃಂದಾವನಕ್ಕೆ ಪ್ರತಿಷ್ಠಾ ವಿಧಿ ನೆರವೇರಿಸಿ ವಿಶೇಷ ಅಭಿಷೇಕ ,ಅಲಂಕಾರ ಸಹಿತ ಪೂಜೆ ನೆರವೇರಿಸಲಾಯಿತು. ಮಂಗಳವಾರ ಸಂಜೆ ವೃಂದಾವನ ಶುದ್ಧಿ ಪ್ರಕ್ರಿಯೆ ,ವಾಸ್ತುಪೂಜೆ ವಾಸ್ತು ಹೋಮಗಳು ನೆರವೇರಿದ್ದವು.
ಇದೇ ಸಂದರ್ಭದಲ್ಲಿ ಮಠದ ಆವರಣದಲ್ಲಿ ಶ್ರೀಗಳ ಸ್ಮರಣಾರ್ಥವಾಗಿ ನಿರ್ಮಿಸಲಾಗುವ ನವಗ್ರಹ ವನ, ಹಾಗೂ ಮೂಲಿಕಾ ವನ ನಿರ್ಮಾಣಕ್ಕೆ ಸಸಿ ನೆಟ್ಟು ಚಾಲನೆ ನೀಡಲಾಯಿತು.ಆಗಮಿಸಿದ ಭಕ್ತರಿಗೆ ಅತೀ ಅಮೂಲ್ಯವಾದ ಔಷಧೀಯ ಸಸಿಗಳನ್ನೂ ವಿತರಿಸಲಾಯಿತು. ಸೋದೆ ಮಠದ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಎಸ್ ರತ್ನಕುಮಾರ್ , ಶೀರೂರು ಮಠದ ವ್ಯವಸ್ಥಾಪಕ ಸುಬ್ರಹ್ಮಣ್ಯ ಭಟ್ , ಮಧ್ವೇಶ ತಂತ್ರಿ ಉದ್ಯಮಿ ಮನೋಹರ ಶೆಟ್ಟಿ , ವಾಸುದೇವ ಭಟ್ ಪೆರಂಪಳ್ಳಿ , ಪುಂಡರೀಕಾಕ್ಷ ಉಪಾಧ್ಯಾಯ , ಹಾಗೂ ನೂರಾರು ಭಕ್ತರು ಉಪಸ್ಥಿತರಿದ್ದರು. ಬುಧವಾರ ಮಧ್ಯಾಹ್ನ ಮಹಾಪೂಜೆಯ ಬಳಿಕ ವಿಪ್ರ ಸಮಾರಾಧನೆ , ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿತು.