ಬೆಳ್ತಂಗಡಿ, ಆ 07 (DaijiworldNews/SM): ತಾಲೂಕಿನಲ್ಲಿ ಭಾರೀ ಮಳೆ ಮುಂದುವರಿದಿದ್ದು ಪ್ರಮುಖ ನದಿಗಳು ದಡಮೀರಿ ಹರಿಯುತ್ತಿದ್ದು ತಾಲೂಕಿನಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣಗೊಂಡಿದೆ. ನೇತ್ರಾವತಿ, ಕಪಿಲ, ಫಲ್ಗುಣಿ ನದಿಗಳು ಹಾಗೂ ತೊರೆಗಳು ಮೈದುಂಬಿ ಹರಿಯುತ್ತಿದೆ. ದಿಡುಪೆ ಪ್ರದೇಶದಲ್ಲಿ ಗದ್ದೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ವಿವಿಧೆಡೆ ರಸ್ತೆಗೆ ಮರಗಳು ಉರುಳಿ ಬಿದ್ದಿದೆ.
ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಬುಧವಾರ ಅಪರಾಹನ್ನದಿಂದ ಮಳೆಯ ಅಬ್ಬರ ಒಂದಿಷ್ಟು ಕಡಿಮೆಯಾಗಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ತುಂಬಿ ಹರಿಯುತ್ತಿದ್ದು ಇಂದು ವಾಹನ ನಿಲುಗಡೆ ಪ್ರದೇಶಗಳು ಜಲಾವೃತಗೊಂಡಿದೆ. ಶಿಶಿಲ ಪ್ರದೇಶದಲ್ಲಿ ಕಪಿಲಾ ನದಿ ದಡಮೀರಿ ಹರಿಯುತ್ತಿದೆ. ಸೇತುವೆಯ ಮೇಲೂ ನೀರು ಹರಿದಿದ್ದು ಗದ್ದೆ ತೋಟಗಳಿಗೆ ನೀರು ನುಗ್ಗಿದೆ. ಶಿಶಿಲ ಶಿಶಿಲೇಶ್ವರ ದೇವಸ್ಥಾನಕ್ಕೂ ನೀರು ನುಗ್ಗಿದೆ.
ಮಡಂತ್ಯಾರು ಸಮೀಪ ಕೊಲ್ಪೆದಬೈಲು ಎಂಬಲ್ಲಿ ಬೃಹತ್ ಮರವೊಂದು ರಸ್ತೆಗೆ ಉರುಳಿ ಬಿದ್ದು ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಮರ ಮುರಿದು ಬಿದ್ದಾಗ ವಿದ್ಯುತ್ ಕಂಬಗಳೂ ಮುರಿದು ಬಿದ್ದದೆ. ಸ್ಥಳೀಯರ ಸಹಕಾರದೊಂದಿಗೆ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸಲಾಯಿತು.
ಕಾಜೂರು ಬಳಿ ರಸ್ತೆಗೆ ಅಡ್ಡಲಾಗಿ ಮರವೊಂದು ಮುರಿದು ಬಿದ್ದಿದ್ದು ವಿದ್ಯುತ್ ಕಂಬಗಳೂ ಧರೆಗುರುಳಿದೆ. ಕೆಲ ಗಂಟೆಗಳ ಕಾಲ ಇಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಶಿರ್ಲಾಲು ಗ್ರಾಮದ ಕೊರಗಪ್ಪ ಮಲೆಕುಡಿಯ ಎಂಬವರ ಮನೆಯ ಮೇಲೆ ಮರ ಮುರಿದು ಬಿದ್ದು ಭಾಗಶಃ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಲಾಯಿಲ ಗ್ರಾಮದ ಪುತ್ರಬೈಲು ಎಂಬಲ್ಲಿನ ನಿವಾಸಿ ಚಿನ್ನಯ್ಯ ಕುಲಾಲ್ ಎಂಬವರ ಮನೆಯ ಹಿಂಭಾಗ ಕುಸಿದಿದ್ದು ಮನೆಗೆ ಭಾಗಶ ಹಾನಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.