ಉಳ್ಳಾಲ, ಆ 07 (DaijiworldNews/SM): ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತ ಮುಂದುವರೆದಿದ್ದು, ಸುಮಾರು 10ಕ್ಕೂ ಹೆಚ್ಚು ತೆಂಗಿನ ಮರಗಳು ಸಮುದ್ರಪಾಲಾಗಿದ್ದು, ಬೀಚ್ ರಸ್ತೆ ಅಪಾಯದಲ್ಲಿದೆ. ಸೋಮೇಶ್ವರದಲ್ಲಿ ಮನೆಯೊಂದು ಅಪಾಯದಲ್ಲಿದ್ದು, ದೇವಸ್ಥಾನದಿಂದ ಸಮುದ್ರ ಸಂಪರ್ಕಿಸುವ ಪ್ರವಾಸೋಧ್ಯಮ ಇಲಾಖೆಯಡಿ ನಿರ್ಮಾಣಗೊಂಡ ಮೆಟ್ಟಿಲುಗಳು ಸಮುದ್ರಪಾಲಾಗಿದೆ.
ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಕಡಲ್ಕೊರೆತದಿಂದ ಉಚ್ಚಿಲ ಬಟ್ಟಪ್ಪಾಡಿ ರಸ್ತೆ ಅಪಾಯದಲ್ಲಿತ್ತು. ಮೆಸ್ಕಾ ಇಲಾಖೆ ವಿದ್ಯುತ್ ಕಂಬಗಳನ್ನು ಬದಲಿಸಿದರೂ ಕಳೆದ ಎರಡು ದಿನಗಳಿಂದ ಆರಂಭಗೊಂಡ ಕೊರೆತಕ್ಕೆ ಇನ್ನೆರಡು ಕಂಬಗಳು ಅಪಾಯದಲ್ಲಿದೆ. ಉಚ್ಚಿಲ ಎಂಡ್ ಪಾಯಿಂಟ್ ಸಂಪರ್ಕಿಸುವ ಈ ರಸ್ತೆಯ ಸುಮಾರು 50ಮೀಟರ್ ವರೆಗೆ ರಸ್ತೆ ಕೊರೆತಕ್ಕೆ ಒಳಗಾಗುವ ಸಾಧ್ಯತೆ ಇದ್ದು ಕಲ್ಲು ಹಾಕುವ ಕಾರ್ಯ ನಡೆದರೂ ರಸ್ತೆ ಅಪಾಯದಲ್ಲಿದೆ.
ಸೋಮೇಶ್ವರ ದೇವಸ್ಥಾನ ಬಳಿ ಮೋಹನ್ ಎಂಬವರ ಮನೆ ಅಪಾಯದಲ್ಲಿದ್ದು, ದೇವಸ್ಥಾನದಿಂದ ಸಮುದ್ರ ಸಂಪರ್ಕಿಸುವ ಪ್ರವಾಸೋಧ್ಯಮ ಇಲಾಖೆಯಡಿ ನಿರ್ಮಾಣಗೊಂಡಿರುವ ಮೆಟ್ಟಿಲುಗಳು ಸಮುದ್ರಪಾಲಾಗಿದೆ.