ವಿಟ್ಲ, ಆ 07 (DaijiworldNews/SM): ಎರಡು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಕೆರೆಯಲ್ಲಿ ಪತ್ತೆಯಾದ ಘಟನೆ ಕೇಪು ಗ್ರಾಮದ ಅಜ್ಜಿನಡ್ಕದಲ್ಲಿ ಬುಧವಾರ ನಡೆದಿದೆ. ಕೇಪು ಗ್ರಾಮದ ಅಜ್ಜಿನಡ್ಕ ಚರ್ಚ್ ಬಳಿಯ ನಿವಾಸಿ ಶಿವಪ್ಪ ನಾಯ್ಕ ಅವರ ಪುತ್ರ ಜನಾರ್ಧನ ನಾಯ್ಕ(36) ಮೃತ ಯುವಕ.
ಇವರು ಆಗಸ್ಟ್ 5ರಂದು ಮನೆಯಿಂದ ಅಜ್ಜಿನಡ್ಕ ಪೇಟೆಗೆಂದು ತೆರಳಿದವರು ಹಿಂತಿರುಗಿ ಬಾರದೇ ನಾಪತ್ತೆಯಾಗಿದ್ದರು. ಇದರಿಂದ ಮನೆಮಂದಿ ಹುಡುಕಾಟ ನಡೆಸಿದ್ದರು. ಆದರೆ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಬುಧವಾರ ಮಧ್ಯಾಹ್ನ ವೇಳೆಗೆ ಮನೆಯ ಸಮೀಪದ ಖಾಸಗಿ ವ್ಯಕ್ತಿಯೊಬ್ಬರ ಕೆರೆಯಲ್ಲಿ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಕೆರೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆಂದು ಅಂದಾಜಿಸಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಳೆತು ದುರ್ನಾತ ಬೀರುತ್ತಿದ್ದ ಮೃತದೇಹವನ್ನು ಫ್ರೆಂಡ್ಸ್ ವಿಟ್ಲ ತಂಡದ ಸದಸ್ಯರು ಹಾಗೂ ಸ್ಥಳೀಯರು ಕೆರೆಯಿಂದ ಮೇಲೆತ್ತಿದ್ದಾರೆ. ಘಟನೆ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್. ಮಹಮ್ಮದ್ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ.