ಬೆಳ್ಮಣ್ , ಆ 07 (Daijiworld News/MSP): ಪರಿವರ್ತನಾ ಸೇವಾ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಪಂಚಾಯತ್ನ ಸಹಭಾಗಿತ್ವದಲ್ಲಿ ಬೆಳ್ಮಣ್ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಪ್ರೌಡಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹದಿಹರೆಯ ಮತ್ತು ಸಾಮಾಜಿಕ ಜಾಲತಾಣದ ಬಗ್ಗೆ ಕಾರ್ಯಾಗಾರ ಆ. 09ರಿಂದ 14ರವರೆಗೆ ಬೆಳ್ಮಣ್ ಪರಿಸರದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಹೇಳಿದರು.
ಅವರು ಬುಧವಾರ ಬೆಳ್ಮಣ್ ವಲಯ ಪತ್ರಕರ್ತರ ಬಳಗದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕಾರ್ಯಾಗಾರದ ಬಗ್ಗೆ ಮಾತನಾಡಿ, ಹದಿಹರೆಯದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವನ್ನು ದುರ್ಬಳಕೆ ಮಾಡಿ ದಾರಿ ತಪ್ಪುತ್ತಿರುವ ಬಗ್ಗೆ ಖೇದವುಂಟಾಗಿ ಈ ಕಾರ್ಯಾಗಾರ ಸಂಘಟಿಸಲಾಗುತ್ತಿದೆ ಎಂದರು. ಆ. 09ರ ಬೆಳಿಗ್ಗೆ 10ಕ್ಕೆ ಬೆಳ್ಮಣ್ ಸರಕಾರಿ ಪ.ಪೂ.ಕಾಲೇಜಿನಲ್ಲಿ ಈ ಕಾರ್ಯಾಗಾರ ಉದ್ಘಾಟನೆಗೊಳ್ಳಲಿದ್ದು, ಮಧ್ಯಾಹ್ನ ೩ಕ್ಕೆ ಬೆಳ್ಮಣ್ ಶ್ರೀ ಲಕ್ಷ್ಮೀಜನಾರ್ದನ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ನಡೆಯಲಿದೆ. ಆ. 10ರಂದು ಬೆಳಿಗ್ಗೆ 10ಕ್ಕೆ ಸೂಡಾ ಸರಕಾರಿ ಪ್ರೌಡಶಾಲೆಯಲ್ಲಿ, 11.30ಕ್ಕೆ ಬೆಳ್ಮಣ್ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ಕಾರ್ಯಾಗಾರ ನಡೆಯಲಿದೆ. ಆ. 13ರ ಬೆಳಿಗ್ಗೆ 11ಕ್ಕೆ ಇನ್ನಾ ಎಂ.ವಿ.ಶಾಸ್ತ್ರಿ ಪ್ರೌಢಶಾಲೆಯಲ್ಲಿ ಹಾಗೂ ಮಧ್ಯಾಹ್ನ 2 ಕ್ಕೆ ಮುಂಡ್ಕೂರು ವಿದ್ಯಾವರ್ಧಕ ಪ.ಪೂ.ಕಾಲೇಜಿನಲ್ಲಿ ಕಾರ್ಯಾಗಾರ ನಡೆಯಲಿದ್ದು ಆ. 14ರಂದು ಮಧ್ಯಾಹ್ನ 2 ಕ್ಕೆ ನಿಟ್ಟೆ ಎನ್ಎಸ್ಎಎಂ ಪ.ಪೂ.ಕಾಲೇಜಿನಲ್ಲಿ ನಡೆಯಲಿದೆ ಎಂದು ರೇಷ್ಮಾ ಶೆಟ್ಟಿ ತಿಳಿಸಿದರು.
ಉಡುಪಿನ ಬಾಳಿಗಾ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಜೇಸಿಐನ ರಾಷ್ಟ್ರೀಯ ತರಬೇತುದಾರ ರಾಜೇಂದ್ರ ಭಟ್, ರೂಪಶ್ರೀ ರತ್ನಾಕರ್, ಡಾ.ಸೌಜನ್ಯ ಶೆಟ್ಟಿ, ಜ್ಯೋತಿ ಮಾಧವ, ಜ್ಯೋತಿ ಮಹಾದೇವ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಲಿದ್ದಾರೆಂದೂ ರೇಷ್ಮಾ ತಿಳಿಸಿದರು.ಕಾರ್ಕಳ ತಾಲೂಕು ಪಂಚಾಯತ್ ಉಪಾಧ್ಯಕ್ಷ ಗೋಪಾಲ ಮೂಲ್ಯ, ತಾ.ಪಂ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಮಾಜಿ ತಾ.ಪಂ. ಆಧ್ಯಕ್ಷ ಬೋಳ ಜಯರಾಮ ಸಾಲ್ಯಾನ್, ಬೋಳ ಗ್ರಾ.ಪಂ ಆಧ್ಯಕ್ಷ ಸತೀಶ್ ಪೂಜಾರಿ, ಕಿಸಾನ್ ಸಂಘದ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು.