ಚಿಕ್ಕಮಗಳೂರು, ಆ 07 (Daijiworld News/MSP): ಘಟ್ಟ ಪ್ರದೇಶದಲ್ಲಿ ವಿಪರೀತ ಮಳೆಯಾಗುತ್ತಿರುವ ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ ಉಂಟಾಗುತ್ತಿರುವುದರಿಂದ ಚಾರ್ಮಾಡಿ ಘಾಟಿನಲ್ಲಿ ಸಂಚಾರವನ್ನು ಬಂದ್ ಮಾಡಲಾಗಿದೆ.
ಚಾರ್ಮಾಡಿ ಘಾಟಿಯಲ್ಲಿ ಹಲವೆಡೆ ಗುಡ್ಡದ ಮಣ್ಣು ರಸ್ತೆಗೆ ಕುಸಿದಿರುವುದರಿಂದ ಸಂಚಾರಕ್ಕೆ ತೊಂದರೆಯುಂಟಾಗಿ ಪ್ರಯಾಣಿಕರು ರಾತ್ರಿ ಇಡೀ ರಸ್ತೆಯಲ್ಲೇ ಕಾಲ ಕಳೆಯುವಂತಾಗಿತ್ತು ಎಂದು ವರದಿಯಾಗಿದೆ. ರಸ್ತೆಗೆ ಕುಸಿದು ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಇನ್ನು ಕರಾವಳಿ ಕಡೆಗೆ ಸಂಚರಿಸುವ ವಾಹನಗಳನ್ನು ಕೊಟ್ಟಿಗೆಹಾರದಲ್ಲಿ ತಡೆಯಲಾಗಿದ್ದು ಬದಲಿ ಮಾರ್ಗದಲ್ಲಿ ವಾಹನ ಸಂಚರಿಸುತ್ತಿದೆ.
ಮಂಗಳವಾರವೂ ಚಾರ್ಮಾಡಿ ಘಾಟಿ ರಸ್ತೆಯ 3ನೇ, 4ನೇ ಹಾಗೂ 7ನೇ ತಿರುವಿನ ಅಲ್ಲಲ್ಲಿ ಗುಡ್ಡ ಕುಸಿದಿದ್ದು ಸಂಚಾರಕ್ಕೆ ತೊಡಕಾಗಿತ್ತು. ಮಾತ್ರವಲ್ಲದೆ ಬೃಹತ್ ಮರವೂ ಬಿದ್ದಿದ್ದು ಇವುಗಳನ್ನು ತೆರವುಗೊಳಿಸಿ ಬಳಿಕ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.