ಉಡುಪಿ, ಆ.07(Daijiworld News/SS): ಕಳೆದ ನಾಲ್ಕು ದಿನಗಳಿಂದ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಹಿನ್ನಲೆಯಲ್ಲಿ ಮಳೆಯಿಂದಾಗುವ ಮನೆ, ಜಾನುವಾರು ಹಾಗೂ ಜೀವ ಹಾನಿಗೆ ಸಂಬಂಧಿಸಿ ಶೀಘ್ರವೇ ಪರಿಹಾರ ನೀಡುವಂತೆ 7 ತಹಶೀಲ್ದಾರ್ಗೆ ತಲಾ 10 ಲಕ್ಷ ರೂ. ಹಣವನ್ನು ಮುಂಗಡವಾಗಿ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಎಲ್ಲ ತಹಶೀಲ್ದಾರ್ಗಳು ಸಂಪರ್ಕದಲ್ಲಿದ್ದಾರೆ. ನೆರೆ, ಕಡಲ್ಕೊರೆತ ಸಹಿತ ಪ್ರಾಕೃತಿಕ ವಿಕೋಪದ ತುರ್ತು ಕಾರ್ಯಾಚರಣೆಗಾಗಿ ಅಗತ್ಯ ಸಲಕರಣೆಗಳನ್ನು ಜೋಡಿಸಿಕೊಂಡಿದ್ದೇವೆ. ಇತರೆ ಇಲಾಖಾಧಿಕಾರಿಗಳೊಂದಿಗೆ ಪರಸ್ಪರ ಸಮನ್ವಯ ಇಟ್ಟುಕೊಂಡಿದ್ದು, ಪ್ರಾಕೃತಿಕ ವಿಕೋಪ ಎದುರಿಸಲು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.
ಪ್ರಾಕೃತಿಕ ವಿಕೋಪದಡಿ ಪರಿಹಾರ ನೀಡಲು ಜಿಲ್ಲಾಡಳಿತದಲ್ಲಿ ಹಣಕಾಸಿನ ಯಾವುದೇ ಕೊರತೆ ಇಲ್ಲ. ಬೈಂದೂರು ಹಾಗೂ ಕುಂದಾಪುರಗಳಲ್ಲಿ ಹೆಚ್ಚಿನ ಮಳೆ ಹಾನಿ ಸಂಭವಿಸಿದ್ದು, ವಾರದ ಹಿಂದೆ ಸಿಇಒ ಜತೆ ಸ್ವತಃ ನಾನೇ ಸ್ಥಳಕ್ಕೆ 10 ಗ್ರಾ.ಪಂ. ಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಲಾಗಿದೆ. ಎನ್ಡಿಆರ್ಎಫ್ ಈಗಾಗಲೇ ಸುರತ್ಕಲ್ನಲ್ಲಿ ಬೀಡುಬಿಟ್ಟಿದೆ. ಕಡಲ್ಕೊರೆತ ಸಂಬಂಧ ಕಾಪು ತಾಲೂಕಿನ ಉಚ್ಚಿಲ ಪ್ರದೇಶಗಳಿಗೆ ಭೇಟಿ ನೀಡಲಾಗಿದೆ ಎಂದು ತಿಳಿಸಿದರು
ಇದೇ ವೇಳೆ, ಜಿಲ್ಲೆಯಲ್ಲಿ ಮಳೆಯಾದ ಕೂಡಲೇ ಶಾಲಾ ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ ಎಂದು ಸುಳ್ಳು ಸುದ್ದಿ ಹರಿಬಿಟ್ಟು ಜನರಿಗೆ ತಪ್ಪು ಮಾಹಿತಿ ನೀಡುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸುವುದಾಗಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದ್ದಾರೆ.