ಬಂಟ್ವಾಳ, ಆ 06 (DaijiworldNews/SM): ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿಯ ನೀರಿನ ಮಟ್ಟ ಏರಿಕಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನ ಎಲ್ಲಾ ಅಧಿಕಾರಿಗಳು ಹೈ ಅಲರ್ಟ್ ಅಗಿರುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತಿಳಿಸಿದ್ದಾರೆ.
ಅವರು ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನೆರೆ ಬೀತಿಯಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 24 ಗಂಟೆಯೂ ಅಧಿಕಾರಿಗಳು ಸಂಪರ್ಕಕ್ಕೆ ಸಿಗುವಂತೆ ತಿಳಿಸಿದ್ದಾರೆ.
ಸೋಮವಾರ ರಾತ್ರಿಯಿಂದ ದಿನವಿಡೀ ಸುರಿಯಿತ್ತಿರುವ ಮಳೆಯಿಂದ ಬಂಟ್ವಾಳ ತಾಲೂಕಿನ ಕೆಲವು ತಗ್ಗು ಪ್ರದೇಶಗಳಿಗೆ ಹಾಗೂ ಎ.ಎಂ.ಆರ್ ಡ್ಯಾಂ ಹಾಗೂ ಇನ್ನಿತರ ಅಪಾಯದ ಪ್ರದೇಶಗಳಿಗೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹಾಗೂ ಬಂಟ್ವಾಳ ತಹಶೀಲ್ದಾರ್ ರಶ್ಮಿ, ಎಸ್.ಆರ್.ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನದಿ ನೀರಿನ ಮಟ್ಟ ಏರಿಕೆ:
ಬೆಳಿಗ್ಗೆ 7.7 ಮೀಟರ್ ಇದ್ದ ನೇತ್ರಾವತಿ ನದಿಯ ನೀರಿನ ಮಟ್ಟ ಸಂಜೆಯ ವೇಳೆಗೆ 7.9 ಮೀಟರ್ ಗೆ ಏರಿಕೆಯಾಗಿದೆ. ನೇತ್ರಾವತಿ ನದಿಯ ನೀರಿನ ಅಪಾಯದ ಮಟ್ಟ 8.5 ಆಗಿದ್ದು ಒಂದು ವೇಳೆ ರಾತ್ರಿಯ ವೇಳೆ ಘಟ್ಟ ಪ್ರದೇಶದಲ್ಲಿ ಮಳೆ ಜೊತೆ ಗಾಳಿಯೂ ಜಾಸ್ತಿಯಾಗಿ ಬಂದರೆ ನಾಳೆ ಮತ್ತಷ್ಟು ನೀರಿನ ಮಟ್ಟ ಹೆಚ್ಚಾಗುವ ಸಾಧ್ಯತೆಗಳಿವೆ.
ಪಾಣೆಮಂಗಳೂರು ಆಲಡ್ಕ ಪ್ರದೇಶದ ಕೆಲವು ತಗ್ಗು ಪ್ರದೇಶದ ಮನೆಗಳಿಗೆ ಈಗಾಗಲೇ ನೀರು ನುಗ್ಗಿದೆ. ಪಾಣೆಮಂಗಳೂರು ಮಿಲಿಟರಿ ಗ್ರೌಂಡ್ ನಲ್ಲಿರುವ ಸುಮಾರು 17 ಮನೆಗಳನ್ನು ಹಾಗೂ ಇನ್ನಿತರ ಕಡೆಯ ತಗ್ಗು ಪ್ರದೇಶಗಳಲ್ಲಿ ಇರುವ ಮನೆಗಳನ್ನು ನೆರೆಯ ಭೀತಿಯಿಂದ ಸ್ಥಳಾಂತರ ಮಾಡಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ. ಎಸ್.ಆರ್.ತಿಳಿಸಿದ್ದಾರೆ.