ಕುಂದಾಪುರ, ಆ 06 (Daijiworld News/MSP): ರಾಜ್ಯದಾದ್ಯಂತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲೆಡೆ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ಇದೀಗ ಮಲೆನಾಡಿನಲ್ಲಿಯೂ ವಿಕೋಪ ತಾಳಿದ ವರುಣನ ಅರ್ಭಟದಿಂದಾಗಿ ಜಲಾಶಯಗಳೂ ಭರ್ತಿಯಾಗುತ್ತಿವೆ. ವಾರಾಹಿ ಯೋಜನೆಯ ಎತ್ತಣಕಟ್ಟೆ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆಯಾಗುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎತ್ತಣಕಟ್ಟೆಯ ಜಲಾಶಯದ ನೀರಿನ ಮಟ್ಟವೂ ಏಕಪ್ರಕಾರವಾಗಿ ಏರುತ್ತಿದೆ.
ಜಲಾಶಯದ ಗರಿಷ್ಟ ಮಟ್ಟವು 563.88 ಮೀಟರ್ ಆಗಿದ್ದು ಸೋಮವಾರ ಮಧ್ಯಾಹ್ನ ಸಮಯಕ್ಕೆ ಜಲಾಶಯದ ನೀರಿನ ಮಟ್ಟವು 563.21ಕ್ಕೆ ಏರಿದೆ. ಇದೇ ರೀತಿ ನೀರಿನ ಹರಿವು ಮುಂದುವರೆದಲ್ಲಿ ಜಲಾಶಯವು ಗರಿಷ್ಟಮಟ್ಟವನ್ನು ತಲುಪುವ ಸಾಧ್ಯತೆಗಳಿದ್ದು, ಯಾವುದೇ ಸಂದರ್ಭದಲ್ಲಿಯೂ ಅಣೆಕಟ್ಟಿನ ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ಹೊರಬಿಡುವ ಸಾಧ್ಯತೆಯಿದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಪರವಾಗಿ ಕಾಮಗಾರಿ ಕಾರ್ಯನಿರ್ವಾಹಕ ಅಭಿಯಂತರ ತಿಳಿಸಿದ್ದಾರೆ.
ನೀರಿನ ಪ್ರಮಾಣ ಹೆಚ್ಚಾಗಿ ಹೆಚ್ಚುವರಿ ನೀರು ಹೊರಬಿಡುವುದರಿಂದ ಅಣೆಕಟ್ಟಿನ ಕೆಳದಂಡೆಯಲ್ಲಿ ಹಾಗೂ ವಾರಾಹಿ ಮತ್ತು ಹಾಲಾಡಿ ನದಿಯ ಪಾತ್ರದುದ್ದಕ್ಕೂ ನೆರೆ ಸಂಭವ ದಟ್ಟವಾಗಿದ್ದು, ತೀರ ಪ್ರದೇಶದಲ್ಲಿ ವಾಸಿಸುತ್ತಿರುವ ಮತ್ತು ಅಪಾಯ ಸಧ್ಯತೆಗಳಿರುವ ನಿವಾಸಿಗಳು ತನ್ನ ಕುಟುಂಬ ಸದಸ್ಯರು, ಜಾನುವಾರು, ಹಾಗೂ ತಮ್ಮ ಉಪಯುಕ್ತ ಸೊತ್ತುಗಳ ಸಹಿತ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.