ಕುಂದಾಪುರ,ಆ.06 (Daijiworld News/RD): ಸಾರ್ವಜನಿಕ ಸ್ಥಳದಲ್ಲಿ ಮಲಗಿದ್ದ ಜಾನುವಾರುಗಳನ್ನು ಸೋಮವಾರ ತಡರಾತ್ರಿ ದುಷ್ಕರ್ಮಿಗಳು ಕದ್ದೊಯ್ದ ಘಟನೆ ನೇರಳಕಟ್ಟೆ ಸಮೀಪದ ಗುಲ್ವಾಡಿಯಲ್ಲಿ ಇಂದು ಬೆಳಕಿಗೆ ಬಂದಿದೆ.
ತಡರಾತ್ರಿ ಸುಮಾರು 1.30ರ ವೇಳೆಗೆ ಘಟನೆ ನಡೆದಿದ್ದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಇಬ್ಬರು ದುಷ್ಕರ್ಮಿಗಳು ಶಾಮಿಯಾನ ಅಂಗಡಿಯ ಮುಖ್ಯ ದ್ವಾರದಲ್ಲಿ ಬಂದು, ಅಲ್ಲಿ ಇದ್ದ ಮೂರು ದನಗಳನ್ನು ಕದ್ದೊಯ್ಯುವ ಪ್ಲ್ಯಾನ್ ಮಾಡಿದ್ದರು. ಆದರೆ ಎರಡು ದನಗಳು ತಪ್ಪಿಸಿಕೊಂಡಿದ್ದು, ಒಂದು ದನವನ್ನು ಹಿಡಿದು ಹಗ್ಗ ಕಟ್ಟಿ ಕದ್ದೊಯ್ದಿದ್ದಾರೆ. ಈ ವಿಡಿಯೋ ರವಿರಾಜ ದೇವಾಡಿಗರ ಶಾಮಿಯಾನ ಅಂಗಡಿಗೆ ಅಳವಡಿಸಿದ ಸಿಸಿಕೆಮೆರಾ ಫೂಟೇಜ್ ಅಲ್ಲಿ ಸೆರೆಯಾಗಿದೆ.
ಈ ಬಗ್ಗೆ ರವಿರಾಜ್ ದೇವಾಡಿಗ ಕುಂದಾಪುರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸಾರ್ವಜನಿಕವಾಗಿ ದನಗಳು ತಿರುಗಾಡುತ್ತಿದ್ದು ದನಗಳು ಯಾರಿಗೆ ಸೇರಿದ್ದು ಎಂದು ತಿಳಿದು ಬಂದಿಲ್ಲ. ಕಂಡ್ಲೂರು ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ಅಕ್ರಮ ಜಾನುವಾರು ಅಪಹರಣ ಪ್ರಕರಣಗಳಿಂದ ಸ್ಥಳೀಯರು ಕಂಗಾಲಾಗಿದ್ದು, ಇಂತಹ ಘಟನೆಗಳ ಬಗ್ಗೆ ಅಧಿಕಾರಿಗಳು ದಿಟ್ಟ ಕ್ರಮ ಕೈಗೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.