ವಿಟ್ಲ, ಆ 06 (Daijiworld News/MSP): ವಿಟ್ಲ ಸುತ್ತಮುತ್ತಲಿನ ಗ್ರಾಮದಲ್ಲಿ ಸೋಮವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕಿಂಡಿಕಟ್ಟು ಮುಳುಗಡೆಯಾಗಿದೆ. ರಸ್ತೆಗೆ ನೆರೆ ನೀರು ನುಗ್ಗಿದ್ದರಿಂದ ಜಲಾವೃತಗೊಂಡಿದ್ದು, ಇನ್ನೂ ಕೆಲವಡೆ ಗುಡ್ಡ ರಸ್ತೆಗೆ ಕುಸಿದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು ಸುರಂಬಡ್ಕ ಕಿಂಡಿ ಅಣೆಕಟ್ಟು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಇದರಿಂದ ಸಾರ್ವಜನಿಕರು ಹೊರಗಡೆ ಹೋಗದೇ ಹೊಳೆಯ ಬದಿಯಲ್ಲಿ ನಿಲ್ಲುವಂತಾಗಿದೆ. ಶಾಲೆಗೆ ರಜೆ ನೀಡಿದ ಬಗ್ಗೆ ಮುನ್ಸೂಚನೆ ತಿಳಿಯದ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಕೆಲವೆಡೆ ಮನೆಯ ಅಂಗಳಕ್ಕೆ ಹಾಗೂ ತೋಟಗಳಿಗೆ ನೀರು ನುಗ್ಗಿದೆ. ಮರದ ದಿಮ್ಮಿ ಹಾಗೂ ಇನ್ನಿತರ ವಸ್ತುಗಳು ಸೇತುವೆಯಲ್ಲಿ ಸಿಕ್ಕಿಹಾಕೊಂಡಿದ್ದರಿಂದ ಕಿಂಡಿ ಅಣೆಕಟ್ಟೆಯ ಬದಿಯ ರಾಡ್ ಮುರಿದು ಹೋಗಿದೆ. ಇದು ಅಪಾಯವನ್ನು ಆಹ್ವಾನಿಸುತ್ತಿದೆ. ಅಣೆಕಟ್ಟೆ ಮೇಲೆ ಬಾಕಿಯಾಗಿರುವ ಕಸಗಳನ್ನು ಒಕ್ಕೆತ್ತೂರು ಹಾಗೂ ಮಂಗಳಪದವು ಯುವಕರು ತೆರವುಗೊಳಿಸಿದರು. ಐದು ವರ್ಷಗಳ ಹಿಂದೆ ಒಂದು ಕೋಟಿ ಅನುದಾನದಲ್ಲಿ ಈ ಕಿಂಡಿ ಅಣೆಕಟ್ಟನ್ನು ನಿರ್ಮಿಸಲಾಗಿತ್ತು. ಸ್ಥಳಕ್ಕೆ ವಿಟ್ಲ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ದಮಯಂತಿ, ವಿಟ್ಲ ಗ್ರಾಮ ಕರಣಿಕ ಪ್ರಕಾಶ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೊಳ್ನಾಡು ಗ್ರಾಮದ ಕುಡ್ತಮುಗೇರು ಹೊಳೆ ತುಂಬಿ ಹರಿದ ಪರಿಣಾಮ ವಿಟ್ಲ-ಸಾಲೆತ್ತೂರು ರಸ್ತೆಯ ಕುಡ್ತಮುಗೇರು ರಸ್ತೆ ಜಲಾವೃತಗೊಂಡಿದೆ. ಇದರಿಂದ ಸುಮಾರು ತಾಸುಗಳ ವರೆಗೆ ರಸ್ತೆ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ. ಈ ಭಾಗ ತಗ್ಗು ಪ್ರದೇಶವಾಗಿದ್ದರಿಂದ ಪ್ರತಿವರ್ಷವೂ ಇದೇ ಪರಿಸ್ಥಿತಿ ಎದುರಾಗುತ್ತಿದೆ. ಕೊಳ್ನಾಡು ಗ್ರಾಮದ ಕರೈ-ಕಾಡುಮಠದಲ್ಲಿ ರಸ್ತೆಗೆ ಗುಡ್ಡ ಕುಸಿದು ರಸ್ತೆ ಬಂದ್ ಆಗಿತ್ತು. ಸ್ಥಳೀಯ ಎಸ್ಡಿಪಿಐ ಕಾರ್ಯಕರ್ತರು, ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ಕುಡ್ತಮುಗೇರು-ಕುಳಾಲು ರಸ್ತೆಯ ಕುದ್ರಿಯಾ ಎಂಬಲ್ಲಿ ಗುಡ್ಡ ಕುಸಿದು ರಸ್ತೆ ಬಿದ್ದಿದೆ. ಇದರಿಂದ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಬಳಿಕ ಸ್ಥಳೀಯರು ತೆರವುಗೊಳಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ಸದಸ್ಯ ಪವಿತ್ರ ಪೂಂಜ ಭೇಟಿ ನೀಡಿ ಪರಿಶೀಲಿಸಿದ್ದಾರೆ.