ಸುಬ್ರಹ್ಮಣ್ಯ,ಆ.06 (Daijiworld News/RD): ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಕಳೆದ ರಾತ್ರಿಯಿಂದ ಸುರಿದ ಭಾರೀ ಮಳೆಗೆ ಸ್ನಾನಘಟ್ಟ ಜಲಾವೃತಗೊಂಡಿದೆ. ಮಳೆಯಿಂದ ಕುಮಾರಧಾರ ಹರಿವು ಹೆಚ್ಚಳವಾಗಿದ್ದು, ಕ್ಷೇತ್ರದ ಸ್ನಾನ ಘಟ್ಟ ನೆರೆಯಿಂದಾಗಿ ಸಂಪೂರ್ಣ ಮುಳುಗಡೆಗೊಂಡಿದೆ.
ಕುಮಾರ ಪರ್ವತ ಘಟ್ಟ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಳವಾಗಿದೆ. ಈ ಬಾರಿಯ ಮಳೆಗಾಲದಲ್ಲಿ ಮೊದಲ ಸಲ ಸ್ನಾನಘಟ್ಟ ಜಲಾವೃತಗೊಂಡಿದೆ. ಕಳೆದ ರಾತ್ರಿ ಕುಮಾರಧಾರ ಹಳೆಯ ಸೇತುವೆ ಕೆಲ ಕಾಲ ಮುಳುಗಡೆಯಾಗಿ, ಭಕ್ತಾದಿಗಳು ನದಿಗಿಳಿಯದ೦ತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಯಿತು. ಹೀಗಾಗಿ ನದಿ ದಡದಲ್ಲಿ ಭಕ್ತಾದಿಗಳು ಬಿಂದಿಗೆ ಹಾಗೂ ಇನ್ನಿತರ ವಸ್ತುಗಳನ್ನು ಬಳಸುವ ಮೂಲಕ ತೀರ್ಥ ಸ್ನಾನ ಮಾಡಿದರು. ಇದೀಗ ಕ್ಷೇತ್ರದ ಸ್ನಾನಘಟ್ಟದಲ್ಲಿ ಕೃತಕ ನೆರೆ ಉಂಟಾಗಿದೆ.