ಮಂಗಳೂರು, ಆ.06(Daijiworld News/SS): ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ಆರಂಭವಾಗಿದ್ದು ಉಚ್ಚಿಲ ಬಟ್ಟಪ್ಪಾಡಿ, ನ್ಯೂ ಉಚ್ಚಿಲ, ಉಳ್ಳಾಲದ ಕಿಲೇರಿಯಾನಗರ, ಕೈಕೋ, ಮುಕ್ಕಚ್ಚೇರಿಯಲ್ಲಿ ಕಡಲ್ಕೊರೆತವಾಗಿದೆ. ಮಾತ್ರವಲ್ಲ, ಜಿಲ್ಲೆಯ ಹಲವೆಡೆ ಭೂಕುಸಿತ ಉಂಟಾಗಿದೆ.
ಉಳ್ಳಾಲ ಪರಿಸರದಲ್ಲಿ ಭಾರೀ ಮಳೆಯಾಗುತ್ತಿದ್ದು, ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಬಳಿ ಅಪಾಯದಲ್ಲಿರುವ ರಸ್ತೆಗೆ ಹಾಕಲಾಗಿರುವ ಕಲ್ಲುಗಳು ಕೊರೆತಕ್ಕೆ ಕುಸಿತಕಂಡರೆ, ನ್ಯೂ ಉಚ್ಚಿಲದಲ್ಲಿ ಸಮುದ್ರಕೊರೆತವಾಗಿದ್ದು ಕಲ್ಲುಗಳು ಸಮುದ್ರಪಾಲಾಗಿದೆ. ಉಳ್ಳಾಲದ ಕೈಕೋ, ಕಿಲೇರಿಯಾನಗರ, ಮುಕ್ಕಚ್ಚೇರಿ, ಸೀಗ್ರೌಂಡ್ ಬಳಿಯೂ ಸಮುದ್ರದ ಅಬ್ಬರಕ್ಕೆ ಸಮುದ್ರದ ಅಲೆಗಳು ಮನೆಗಪ್ಪಳಿಸಿದ್ದು ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ಕರಾವಳಿಯಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾಧಾರಣದಿಂದ ಭಾರಿ ಮಳೆಯಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿದಿದ್ದು ಹಲವೆಡೆ ಮನೆ, ಗುಡ್ಡ ಹಾಗೂ ಭೂಕುಸಿತ ಸಂಭವಿಸಿದ ಕುರಿತು ವರದಿಯಾಗಿದೆ. ವಿಟ್ಲ ಸಮೀಪದ ಕೊಲ್ನಾಡು, ಮುಡಿಪು ಸಮೀಪಗ ಕಂಬಳಪದವು ಪ್ರದೇಶಗಳಲ್ಲಿ ಭೂ ಕುಸಿತ ಉಂಟಾಗಿದೆ. ಮಾತ್ರವಲ್ಲ ಸುರಿದ ಭಾರೀ ಮಳೆಗೆ ನಂತೂರು ಬಳಿಯ ಕಂಡೆಟ್ಟು ಶಕ್ತಿನಗರ ರಸ್ತೆಯಲ್ಲಿ ಬೃಹತ್ ಮರಗಳು ಉರಳಿಬಿದ್ದಿದೆ ಎನ್ನಲಾಗಿದೆ.