ಮಂಗಳೂರು, ಆ 05 (DaijiworldNews/SM): ಮಂಗಳೂರು ನಗರದಲ್ಲಿ ಪೊಲೀಸ್ ಆಯುಕ್ತರಾಗಿ ದಕ್ಷ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದ ಸಂದೀಪ್ ಪಾಟೀಲ್ ಅವರನ್ನು ವರ್ಗಾವಣೆಗೊಳಿಸಿ ನೂತನ ಕಮಿಷನರ್ ಆಗಿ ಎ ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಕಗೊಳಿಸಿದ ಆದೇಶವನ್ನು ರದ್ದುಗೊಳಿಸಲಾಗಿದೆ. ಇದೀಗ ನೂತನ ಕಮಿಷನರ್ ಆಗಿ ಡಾ. ಪಿ.ಎಸ್ ಹರ್ಷ ಅವರನ್ನು ನೇಮಕಗೊಳಿಸಲಾಗಿದೆ.
ಈ ಹಿಂದೆ ಡಾ. ಹರ್ಷ ಅವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬೆಂಗಳೂರು ಇದರ ಭದ್ರತಾ ವಿಭಾಗದ ನಿರ್ದೇಶಕರಾಗಿದ್ದರು. 2017ರಲ್ಲಿ ವಾರ್ತಾ ಇಲಾಖೆಯ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದರು. ಅಲ್ಲದೆ ಪುತ್ತೂರು ಉಪವಿಭಾಗದ ಎಎಸ್ಪಿಯಾಗಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುವ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ಕಮೀಷನರ್ ಆಗಿ ನೇಮಕಗೊಳಿಸಿ ಸರಕಾರ ಆದೇಶ ನೀಡಿದೆ. ಇನ್ನು ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿಯಾಗಿ ಡಾ. ಅರುನಾಂಗ್ಶು ಗಿರಿ ಗಿರಿ ಅವರನ್ನು ನೇಮಕಗೊಳಿಸಲಾಗಿದೆ. ಇನ್ನು ಈ ವಿಭಾಗದಲ್ಲಿ ಡಿಸಿಪಿಯಾಗಿದ್ದ ಹನುಮಂತ್ ರಾಯ್ ಅವರನ್ನು ವರ್ಗಾವಣೆಗೊಳಿಸಲಾಗಿದೆ.
ಇನ್ನು ಕೆಲವೇ ತಿಂಗಳ ಕಾಲ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದ ಸಂದೀಪ್ ಪಾಟೀಲ್ ಜನಾನುರಾಗಿಯಾಗಿದ್ದರು. ಸಂದೀಪ್ ಪಾಟೀಲ್ ಅವರನ್ನು ಡಿಐಜಿ ಮತ್ತು ಬೆಂಗಳೂರು ನಗರ ಅಪರಾಧ ಇಲಾಖೆಯ ಜಂಟಿ ಆಯುಕ್ತರಾಗಿ ತಕ್ಷಣದಿಂದಲೇ ಅಧಿಕಾರಕ್ಕೆ ಬರುವಂತೆ ನಿಯೋಜಿಸಲಾಗಿದೆ.
ಸಂದೀಪ್ ಪಾಟೀಲ್ ಅವರು ಮಂಗಳೂರಿನಲ್ಲಿ ಕೆಲವೇ ತಿಂಗಳ ಸೇವಾ ಅವಧಿಯಲ್ಲಿ ದಕ್ಷ ಅಧಿಕಾರಿ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದರು. ಅಕ್ರಮ ಗೋಸಾಗಾಣಿಕೆ, ಗಾಂಜಾ ಮಾರಾಟಗಾರರಿಗೆ ಕಡಿವಾಣ ಹಾಕಿದ್ದರು. ರೌಡಿಶೀಟರ್ಗಳ ಹೆಡೆಮುರಿ ಕಟ್ಟಲು ಶೂಟೌಟ್ ಆದೇಶವನ್ನೂ ನೀಡಿದ್ದರು. ಸಾಮಾಜಿಕ ಜಾಲತಾಣದ ಮೂಲಕ ಸಾರ್ವಜನಿಕರ ದೂರು ದುಮ್ಮಾನಗಳನ್ನು ಆಲಿಸುತ್ತಿದ್ದ ಸಂದೀಪ್ ಪಾಟೀಲ್ ಪೊಲೀಸ್ ಫೋನ್ ಇನ್ ಕಾರ್ಯಕ್ರಮದ ಮೂಲಕವೂ ಜನಪ್ರಿಯರಾಗಿದ್ದರು.