ಬೆಳ್ತಂಗಡಿ, ಆ 05 (DaijiworldNews/SM): ತಾಲೂಕಿನಾಧ್ಯಂತ ಸೋಮವಾರ ಬೆಳಗ್ಗಿನಿಂದ ಗುಡುಗು ಸಿಡಿಲು ಹಾಗೂ ಗಾಳಿಯೊಂದಿಗೆ ಭಾರೀ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ನದಿಹಳ್ಳಗಳು ತುಂಬಿ ಹರಿಯುತ್ತಿದೆ.
ನೇತ್ರಾವತಿ, ಕಪಿಲ, ಫಲ್ಗುಣಿ, ಸೋಮಾವತಿ, ಮೃತ್ಯುಂಜಯ ನದಿಗಳು ಹಾಗೂ ಹಳ್ಳಗಳು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ. ತಾಲೂಕಿನ ವಿವಿಧೆಡೆಗಳಲ್ಲಿ ಗಾಳಿ ಮಳೆಗೆ ಮರಗಳು ಮುರಿದು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸುಮಾರು ಹತ್ತಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.
ಇಲಾಖೆಯ ಅಧಿಕಾರಿಗಳು ಪ್ರಾಧಮಿಕ ಮಾಹಿತಿ ನೀಡಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ವಿದ್ಯುತ್ ಸಂಪರ್ಕ ಸರಿಪಡಿಸಲು ಸಾಧ್ಯವಾಗಿಲ್ಲ. ಧರ್ಮಸ್ಥಳ ಗ್ರಾಮದ ಕ್ಯಾಡಿಯಲ್ಲಿ ಬೊಮ್ಮಿ ಎಂಬವರ ಮನೆಯ ಮೇಲೆ ಮರ ಬಿದ್ದು ಮನೆಗೆ ಭಾಗಶಃ ಹಾನಿ ಸಂಭವಿಸಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೆರಿಯ ಗ್ರಾಮದ ಪಾದೆಗುಡ್ಡೆ ಎಂಬಲ್ಲಿನ ನಿವಾಸಿ ಅಜಿತ್ ಎಂಬವರ ಮನೆಗೆ ಅಡಿಕೆಮರ ಮುರಿದು ಬಿದ್ದು ಮನೆಗೆ ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಾರ್ಮಾಡಿಘಾಟಿಯಲ್ಲಿಯೂ ಭಾರಿ ಪ್ರಮಾಣದ ಮಳೆ ಸುರಿಯುತ್ತಿದೆ. ಆದರೆ ವಾಹನಗಳ ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ. ಹಾಗೂ ಯಾವುದೇ ಭೂ ಕುಸಿತಗಳು ಸಂಭವಿಸಿಲ್ಲ.