ಉಡುಪಿ,ಆ.05 (Daijiworld News/RD): ಹಲವು ಸಮಯಗಳಿಂದ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆ ಸ್ಥಗಿತಗೊಂಡಿದ್ದು ಪುನರ್ ಆರಂಭಿಸುವಂತೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಹೀಗಾಗಿ ಮರಳುಗಾರಿಕೆಗೆ ಪರವಾನಿಗೆಯನ್ನು ಪಡೆದಿರುವವರಿಗೆ ತಕ್ಷಣ ಪರವಾನಿಗೆ ನೀಡಿ ತುರ್ತಾಗಿ ಮರಳುಗಾರಿಕೆಯನ್ನು ಆರಂಭಿಸುವಂತೆ ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಇವರು ಜಿಲ್ಲಾಧಿಕಾರಿಯವರನ್ನು ಆಗ್ರಹಿಸಿದರು.
ಕಳೆದ ಹಲವು ತಿಂಗಳಿಂದ ಉಡುಪಿ ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ನಿಷೇಧಿಸಿಧಿಸಲಾಗಿತ್ತು. ಈ ಬಗ್ಗೆ ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಇವರು ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗಸ್ಟ್ 1 ರಿಂದ ಮರಳುಗಾರಿಕೆ ಪ್ರಾರಂಭಿಸಲು ಅನುಮತಿ ನೀಡುವಂತೆ ಕೋರಿದ್ದರು.
ಮಾನ್ಯ ಶಾಸಕರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಯಡಿಯೂರಪ್ಪ, ಈ ಮನವಿಯನ್ನು ಪರಿಶೀಲಿಸಿ ಉಡುಪಿ ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಮೀನುಗಾರಿಕೆ ನಿಷೇಧ ಇರುವುದರಿಂದ ಆ ಸಮಯದವರೆಗೆ ಮಾತ್ರ ಮರಳುಗಾರಿಕೆ ನಿಷೇಧಿಸಿ, ಆಗಸ್ಟ್ ತಿಂಗಳಿನಿಂದ ಮರಳುಗಾರಿಕೆ ಆರಂಭಿಸಬಹುದು ಎಂದು ಹೇಳಿದ್ದಾರೆ.
ಸಿ ಆರ್ ಜಡ್ ಕ್ಲಿಯರೆನ್ಸ್ ನೀಡಲಾದ ಸರಕಾರದ ಪತ್ರದಲ್ಲಿ ವಿಧಿಸಿರುವ ಹೆಚ್ಚುವರಿ ಶರತ್ತನ್ನು ಮಾರ್ಪಾಡುಗೊಳಿಸಿ ಮೀನುಗಾರಿಕಾ ನಿಷೇಧದ ಅವಧಿಯಾದ ಜೂನ್ 1 ರಿಂದ ಜುಲೈ 31 ರ ವರೆಗೆ ಮಾತ್ರ ಮರಳುಗಾರಿಕೆಯನ್ನು ನಿಷೇಧಿಸಿ, ಆಗಸ್ಟ್ ನಿಂದ ಮರಳುಗಾರಿಕೆ ಯನ್ನು ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಆದುದರಿಂದ ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿಗಳು 7 ಮಂದಿ ಸದಸ್ಯರ ಸಮಿತಿಯ ಸಭೆಯನ್ನು ತಕ್ಷಣ ಕರೆದು ಮರಳುಗಾರಿಕೆಗೆ ಪರವಾನಿಗೆಯನ್ನು ಪಡೆದಿರುವವರಿಗೆ ತಕ್ಷಣ ಪರವಾನಿಗೆ ನೀಡಿ ತುರ್ತಾಗಿ ಮರಳುಗಾರಿಕೆಯನ್ನು ಆರಂಭಿಸುವಂತೆ ಮಾಡಬೇಕು ಎಂದು ಉಡುಪಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ಜಿಲ್ಲಾಧಿಕಾರಿಗೆ ಹೇಳಿದರು.