ಮಂಗಳೂರು, ಆ.05 (Daijiworld News/RD): ಕರಾವಳಿಯೆಂದರೆ ಸಾಕು ಅಲ್ಲಿ ದೈವಾರಾಧನೆ, ಭೂತಾರಾಧನೆ ಹಾಗೂ ನಾಗಾರಾಧನೆಗೆ ಹೆಚ್ಚು ಮಹತ್ವ ಕೊಟ್ಟು, ಶ್ರದ್ಧೆ, ಭಕ್ತಿ ಭಾವದ ಮೂಲಕ ಆಚರಿಸುತ್ತಾರೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ ಪಂಚಮಿ ಆಗಿದ್ದು, ನಾಗರಾಜನಿಗೆ ಹಾಲೆರೆದು ವಿಶೇಷ ಪೂಜೆ ಪ್ರಾರ್ಥನೆ ಸಲ್ಲಿಸುವ ಮೂಲಕ ಸಂಭ್ರಮಾದ ಆಚರಣೆ ಕರಾವಳಿಯ ಎಲ್ಲೆಡೆಯು ಇಂದು ಮೂಡಿತ್ತು.
ನಾಗರಪಂಚಮಿಯ ಹಿನ್ನೆಲೆಯಲ್ಲಿ ಕರಾವಳಿಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದ್ದು, ನಾಗನ ಕಲ್ಲಿಗೆ ತನುಎರೆಯುವ ಮೂಲಕ ಪ್ರಾರ್ಥನೆ ಸಲ್ಲಿಸುವ ದೃಶ್ಯ ಎಲ್ಲೆಡೆ ಇಂದು ಕಂಡುಬಂದಿತು. ನಾಗರ ಪಂಚಮಿಯ ವಿಶೇಷ ದಿನವಾದ ಇಂದು ಕರಾವಳಿಯ ಪ್ರಮುಖ ನಾಗಕ್ಷೇತ್ರಗಳಲ್ಲಿ ಒಂದಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪೂಜೆ ನೆರವೇರುತ್ತಿದೆ. ಇನ್ನು ಮಂಗಳೂರಿನ ಐತಿಹಾಸಿಕ ನಾಗಕ್ಷೇತ್ರಗಳ ಸಾಲಿಗೆ ಸೇರುವ ಕುಡುಪು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಮುಂಜಾನೆಯಿಂದ ಪೂಜಾ ಸೇವೆ ನಡೆಯುತ್ತಿದೆ. ಇನ್ನು ಇತರ ಕಡೆಗಳಲ್ಲಿ ಹಲವಾರು ನಾಗ ಬಿಂಬಗಳಿಗೆ ಹಾಲೆರೆಯುವ ಮೂಲಕ ನಿರಂತರ ಪೂಜಾ ಸೇವೆಗಳು ಈಗಾಗಲೆ ನಡೆಯುತ್ತಿದೆ.
ನಾಗರಪಂಚಮಿಯ ಹಿನ್ನೆಲೆಯಲ್ಲಿ ಸೀಯಾಳ, ಹಿಂಗಾರ, ಹಾಲು ಸೇರಿದಂತೆ ನಾಗನಿಗೆ ಪ್ರಿಯವಾದ ಕೇದಿಗೆ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಗೆಂದಳಿ ಮತ್ತು ಸಾದಾ ಗೆಂದಳಿ, ಅರಶಿನ ಎಲೆ, ಬಾಳೆಹಣ್ಣು, ಸೇರಿದಂತೆ ಇನ್ನಿತರ ಹಣ್ಣುಹಂಪಲುಗಳಿಗೆ ಇಂದು ಭರ್ಜರಿ ಬೇಡಿಕೆಯಿದ್ದು, ಹೆಚ್ಚಿನ ಲಾಭ ಗಳಿಸುವ ಮೂಲಕ ವ್ಯಾಪಾರಸ್ಥರಿಗೂ ಈ ದಿನ ವಿಶೇಷವಾಗಿದೆ.