ಡಿ 18: ಗುಜರಾತ್ ಫಲಿತಾಂಶ ಬಿಜೆಪಿಗೆ ತಕ್ಕ ಪಾಠ ಕಲಿಸಿದೆ. ನೋಟು ಅಮಾನ್ಯೀಕರಣ, ಜಿಎಸ್ ಟಿ ನೊಂದಿರುವ ಜನರು ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಡಿ. 18 ರ ಸೋಮವಾರ ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು ಮೋದಿ ಅಲೆ ದೇಶದಲ್ಲೆಡೆ ಕಡಿಮೆಯಾಗುತ್ತಿದೆ. ಆದರೂ ಗುಜರಾತ್ ಫಲಿತಾಂಶ ನಮಗೆ ಅಲ್ಪ ಮಟ್ಟಿಗೆ ಹಿನ್ನಡೆಯಾದರೂ, ನನಗೆ ಈಗಲೂ ಇವಿಎಂ, ವಿವಿಪ್ಯಾಟ್ ಮೇಲೆ ಅನುಮಾನವಿದೆ ಪ್ರತಿಕ್ರಿಯೆಸಿದ್ದಾರೆ. ಮೋದಿ ಗುಜರಾತ್ ನಲ್ಲಿ ಭರ್ಜರಿ ಪ್ರಚಾರ ಮಾಡಿದ್ದರು. ನಾನು ಗುಜರಾತ್ ನೆಲದವನು, ತನಗೆ ಆಶೀರ್ವಾದ ಮಾಡಿ ಎಂದು ಪ್ರಧಾನಿ ಮೋದಿ ಮತದಾರರಲ್ಲಿ ವಿನಂತಿಸಿಕೊಂಡಿದ್ದರು. ಆದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆದಿದೆ ಎಂದು ಹೇಳಿದರು.ಹಾಗಾಗಿ ಬಹುಮತ ಪಡೆಯಲು ನಾವು ಸೋತರೂ ಗೆದ್ದಂತೆಯೇ ಎಂದು ಹೇಳಿದರು.