ಕುಂದಾಪುರ ಡಿ 19 : ವಿಶ್ವಮಾನವತೆಯನ್ನು ಹೊಂದಿರುವ ವಿವೇಕಾನಂದರಿಗೆ ವಿಶ್ವವನ್ನೆ ತಬ್ಬಿಕೊಳ್ಳುವ ಸಾಮರ್ಥ್ಯವಿತ್ತು. ತನ್ನ ಸ್ಪೂರ್ತಿದಾಯಕ ಮಾತು, ಕೃತಿಗಳ ಮೂಲಕ ಯುವ ತರುಣರಿಗೆ ಐಕಾನ್ ಆಗಬಲ್ಲ ಜೀವಂತ ದೇವರೆಂದರೆ ಅದು ಸ್ವಾಮಿ ವಿವೇಕಾನಂದರು ಎಂದು ಯುವಾ ಬ್ರಿಗೇಡ್ ಮಾರ್ಗದರ್ಶಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ಪಟ್ಟರು.
ಕುಂದಾಪುರದ ಆರ್.ಎನ್.ಶೆಟ್ಟಿ ಸಭಾಭವನದಲ್ಲಿ ಡಿ.18 ರ ಭಾನುವಾರ ಯುವಾ ಬ್ರಿಗೇಡ್ ಅರ್ಪಿಸಿದ ಮತ್ತೊಮ್ಮೆ ದಿಗ್ವಿಜಯ ಸ್ವಾಮಿ ವಿವೇಕಾನಂದರ ಚಿಕ್ಯಾಗೋ ಭಾಷಣಕ್ಕೆ ೧೨೫ ವರ್ಷದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಅಮೇರಿಕಾದ ಮುಂದೆಯೇ ಭಾರತ ಶ್ರೇಷ್ಠ ಎನ್ನುವುದನ್ನು ತೋರಿಸಿಕೊಟ್ಟ ನಂತರವೇ ಅವರು ಯುರೋಪ್ಗೆ ತೆರಳಿದರು. ಅಮೇರಿಕಾವನ್ನೇ ತನ್ನ ವಾಕ್ ಚಮತ್ಕಾರದಿಂದ ಗೆದ್ದವರಿಗೆ ಯುರೋಪ್ನಲ್ಲಿ ತನ್ನ ಮಾತುಗಳ ಮೂಲಕ ನೀವು ನಮ್ಮನ್ನು ಆಳಲು ಯೋಗ್ಯರಲ್ಲ, ನಮ್ಮ ಸೇವೆ ಮಾಡಲು ಎಂದಿದ್ದರು. 125 ವರ್ಷಗಳ ಹಿಂದೆಯೇ ಭಾರತದ ಮಹತ್ವಿಕೆಯನ್ನು ಎತ್ತಿಹಿಡಿದ ವಿವೇಕಾನಂದರ ಮಾತಿನ ಸಾಲುಗಳು ಶಕ್ತಿ ಸ್ಪೂರ್ತಿ ಕೊಡುತ್ತವೆ. ಅವರ ಪುಸ್ತಕಗಳು ಜೀವಚೈತನ್ಯವನ್ನು ನೀಡುತ್ತದೆ ಎಂದು ಹೇಳಿದರು.
ತಂದೆತಾಯಿಗಳು ಕೊಟ್ಟ ಭೌತಿಕ ಅಸ್ತಿತ್ವವನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಸೌಂದರ್ಯ ಶಾಶ್ವತವಲ್ಲ. ವಯಸ್ಸಾದಂತೆ ಸೌಂದರ್ಯ ಕುಗ್ಗುತ್ತದೆ. ಸೌಂದರ್ಯ ವೃದ್ಧಿಗೆ ನೀಡುವ ಸಮಯವನ್ನೇ ಮನಸ್ಸನ್ನು ಸುಂದರವನ್ನಾಗಿ ಕಾಣಲು ನೀಡಿ. ಇದರಿಂದ ಮನಸ್ಸು ಸುದೃಢವಾಗುತ್ತದೆ. ಬಾಹ್ಯ ಸೌಂದರ್ಯಕ್ಕಿಂದ ಮನಸ್ಸಿನ ದೃಢತೆ ಶ್ರೇಷ್ಠ ಎಂದರು.
ಬೆಳಗುವ ದೀಪಕ್ಕೆ ಎಣ್ಣೆ ಎರೆದು ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರು ಶ್ರೀ ರಾಮಕೃಷ್ಣ ಮಠದ ಧರ್ಮವೃತಾನಂದ ಸ್ವಾಮೀಜಿ ಮಾತನಾಡಿ ಸ್ವಾಮಿ ವಿವೇಕಾನಂದರನ್ನು ಹೃದಯದಲ್ಲಿ ಇರಿಸಿಕೊಂಡರೆ ಅವರು ಸಿಂಹ ಆಗುತ್ತಾರೆ. ವಿವೇಕಾನಂದರ ಜೀವನ ಅಧ್ಯಯನ ಮಾಡಿದರೆ ಸಮಗ್ರ ಭಾರತವನ್ನೆ ಅಧ್ಯಯನ ಮಾಡಿದಂತೆ. ಇಂಥಹ ವ್ಯಕ್ತಿಯ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾಗಿದೆ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿಭಾಗ ಕಾರ್ಯಕಾರಿಣಿ ಸದಸ್ಯ ಸುಬ್ರಹ್ಮಣ್ಯ ಹೊಳ್ಳ, ಬಿ.ಬಿ.ಹೆಗ್ಡೆ ಕಾಲೇಜು ಪ್ರಾಂಶುಪಾಲರಾದ ಪ್ರೋ.ದೋಮ ಚಂದ್ರಶೇಖರ್ ಶುಭಹಾರೈಸಿದರು. ಪ್ರಗತಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ಶಶಿಧರ ತಲ್ಲಂಗಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೆಳಿಗ್ಗೆ ಶೋಭಾಯಾತ್ರೆಗೆ ಕುಂದಾಪುರ ಎಜ್ಯುಕೇಶಷನ್ ಸೊಸೈಟಿ ಅಧ್ಯಕ್ಷ ಬಿ.ಎಂ.ಸುಕುಮಾರ್ ಶೆಟ್ಟಿ ಚಾಲನೆ ನೀಡಿದರು. ನಂತರ ವಿವಿಧ ಗೋಷ್ಠಿಗಳು ನಡೆದವು.