ಕುಂದಾಪುರ, ಡಿ 18: ಇತ್ತೀಚೆಗೆ ಹೊನ್ನಾವರದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಪರೇಶ್ ಮೇಸ್ತಾ ಸಾವಿನ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಕುಂದಾಪುರದಲ್ಲಿ ಕೊಂಕಣ ಖಾರ್ವಿ ಸಮುದಾಯ ಮತ್ತು ಹಿಂದೂ ಪರ ಸಂಘಟನೆಗಳಿಂದ ಶಾಂತಿಯುತ ಮೌನ ಪ್ರತಿಭಟನೆ ಡಿ 18 ರ ಶುಕ್ರವಾರ ನಡೆಯಿತು. ಕೊಂಕಣ ಖಾರ್ವಿ ಸಮುದಾಯದ ದೇವಸ್ಥಾನ ಮಹಾಕಾಳಿ ದೇವಳದಿಂದ ಹೊರಟ ಮೆರವಣಿಗೆ ಕುಂದಾಪುರ ಶಾಸ್ತ್ರಿ ಸರ್ಕಲ್ಗೆ ಬಂದು ಅಲ್ಲಿಂದ ಪುನಃ ಕುಂದಾಪುರ ಉಪವಿಭಾಗಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆ ಜರುಗಿತು.
ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಪರೇಶ್ ಸಾವಿನ ಮರಣೋತ್ತರ ಪರೀಕ್ಷೆಯಲ್ಲಿ ಸಹಜ ಸಾವೆಂದು ಬಂದಿರುವ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಫಲಕಗಳನ್ನ ಹಿಡಿದು ಪರೇಶ್ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು. ಕುಂದಾಪುರ ಸಹಾಯಕ ಕಮೀಷನರ್ ಕಚೇರಿಯಲ್ಲಿ ಮಾತನಾಡಿದ ಖಾರ್ವಿ ಸಮುದಾಯದ ಮುಖಂಡ ಪರೇಶ್ ಸಾವನ್ನ ಖಂಡಿಸಿ ಮಾತನಾಡಿ, ಇಲ್ಲಿಯವರೆಗೆ ಖಾರ್ವಿ ಸಮುದಾಯದವರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸಿಲ್ಲ ಆದರೆ ನಾವು ಈ ಪ್ರತಿಭಟನೆಯಲ್ಲಿ ಆಗ್ರಹಿಸುವುದೇನೆಂದರೆ ಪರೇಶ್ ಮೇಸ್ತಾ ಸಾವಿನ ತನಿಖೆ ನಿಷ್ಪಕ್ಷಪಾತವಾಗಿ ಆಗಬೇಕು. ಮತ್ತು ಅವನಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ಸವಲತ್ತುಗಳು ಸಿಗಬೇಕು. ಏಕೆಂದರೆ ಪರೇಶ್ ಕುಟುಂಬವೆನ್ನುವುದು ಆರ್ಥಿಕವಾಗಿ ಹಿಂದುಳಿದ ಕುಟುಂಬ ಪರೇಶ್ ಸಾವಿನಿಂದ ಕುಟುಂಬದ ಆಧಾರ ಸ್ತಂಭ ಕಳೆದುಹೋಗಿದೆ. ಈ ಹಿನ್ನೆಲೆ ಶೀಘ್ರದಲ್ಲಿ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನ ಸರ್ಕಾರ ನೀಡಬೇಕೆಂದು ಆಗ್ರಹಿಸಿದರು. ಈಗಾಗಲೇ ತಜ್ಞ ವೈದ್ಯರು ನೀಡಿರುವ ಪೋಸ್ಟ್ಮಾರ್ಟ್ ರಿಪೋರ್ಟ್ ಕುರಿತು ಅನುಮಾನ ಮೂಡಿದ್ದು ಈ ರಿಪೋರ್ಟ್ ಕುರಿತು ತಜ್ಞರಿಂದ ಪುನಃ ತನಿಖೆ ನಡೆಸಬೇಕೆಂದು ಆಗ್ರಹಿಸಿದರು. ನಂತರ ಉಪವಿಭಾಗಾಧಿಕಾರಿಗಳ ಅನುಪಸ್ಥಿತಿಯಲ್ಲಿ ತಹಶೀಲ್ದಾರ್ ಜಿ.ಎಂ ಬೋರ್ಕರ್ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಅವರು ಈ ಮನವಿಯನ್ನ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಎಸ್.ಪಿ ಸಂಜೀವ್ ಪಾಟೀಲ್ರಿಂದ ಶ್ಲಾಘನೆ
ಉತ್ತರ ಕನ್ನಡದಲ್ಲಿ ನಡೆದ ಕೋಮುಗಲಭೆಯಿಂದ ಕಂಗೆಟ್ಟಿರುವ ಪೊಲೀಸ್ ಇಲಾಖೆ, ಕುಂದಾಪುರದಲ್ಲಿ ನಡೆಯುವ ಪ್ರತಿಭಟನೆ ಕುರಿತು ಬಾರಿ ಮುನ್ನೆಚ್ಚರಿಕಾ ಕ್ರಮವನ್ನ ಕೈಗೊಂಡಿತ್ತು. ಕುಂದಾಪುರದಲ್ಲಿ ಸೋಮವಾರ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದ ಪೊಲೀಸರು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೇಚ್ಚರಿಕೆ ನಡೆಸಿದ್ದರು. ಸ್ವತಃ ಎಸ್.ಪಿ ಸಂಜೀವ್ ಪಾಟೀಲ್ ಸ್ಥಳದಲ್ಲಿ ಮೊಕ್ಕಾಂ ಹೂಡಿ ಭದ್ರತೆಯನ್ನ ಪರಿಶೀಲಿಸಿದ್ದರು. ನಂತರ ಶಾಂತಿಯುತ ಪ್ರತಿಭಟನೆ ನಡೆಸಿದ ಹಿನ್ನೆಲೆ ಪ್ರತಿಭಟನೆ ಬಳಿಕ ಪ್ರತಿಭಟನಾಕಾರರನ್ನ ಶ್ಲಾಘಿಸಿದರು.