ಮಂಗಳೂರು, ಆ.03(Daijiworld News/SS): ಅಧಿಕಾರ ವಹಿಸಿಕೊಂಡ ಕೂಡಲೇ ಮುಖ್ಯಮಂತ್ರಿಗಳು ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದ್ದಾರೆ. ಹಿಂದಿನ ಸರ್ಕಾರ ನಿಯುಕ್ತಿಗೊಳಿಸಿದ ಅಧಿಕಾರಿಗಳನ್ನೂ ಎತ್ತಂಗಡಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ದಕ್ಷತೆಯಿಂದ ಕೆಲಸ ಮಾಡುವ ಅಧಿಕಾರಿಗಳ ವರ್ಗಾವಣೆ ಸರಿಯಲ್ಲ ಎಂದು ಯುಟಿ ಖಾದರ್ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಿದ್ದ ವೇಳೆ ಕನಿಷ್ಠ ಒಂದು ವರ್ಷದವರೆಗೆ ಯಾವುದೇ ವರ್ಗಾವಣೆ ಮಾಡಿರಲಿಲ್ಲ. ಆದರೆ ಈಗ ಸಚಿವ ಸಂಪುಟ ವಿಸ್ತರಣೆಯಾಗದೆ, ಗೃಹ ಸಚಿವರ ನೇಮಕವಾಗುವ ಮೊದಲೇ ತರಾತುರಿಯಲ್ಲಿ ಉತ್ತಮ ಅಧಿಕಾರಿಗಳನ್ನೂ ಮುಖ್ಯಮಂತ್ರಿಗಳು ವರ್ಗಾಯಿಸುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
ಜಿಲ್ಲೆಯ ಸ್ಯಾಂಡ್ ಬಜಾರ್ ಆ್ಯಫ್ ರಾಜ್ಯದಲ್ಲಿ ಮಾದರಿಯಾಗಿದೆ. ಇದರಿಂದಾಗಿ ಮರಳು ಮಾಫಿಯಾ, ಇಸ್ವಿಟ್ ಕ್ಲಬ್ ಸ್ಕಿಲ್ ಗೇಮ್ ಮುಂತಾದ ಅಕ್ರಮ ಚಟುವಟಿಕೆಗಳು ಕಡಿಮೆಯಾಗಿದೆ. ಇದಕ್ಕಾಗಿ ಜಿಲ್ಲೆಯ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾರೆ. ಈ ಸಂದರ್ಭ ಜಿಲ್ಲೆಯ ಉತ್ತಮ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು. ಸ್ವಂತ ವಿಚಾರಕ್ಕಾಗಿ ವರ್ಗಾವಣೆ ಮಾಡುವುದು ಜಿಲ್ಲೆಯ ಹಿತ ದೃಷ್ಟಿಯಿಂದ ಒಳ್ಳೆಯದಲ್ಲ. ಈ ಹಿನ್ನಲೆ, ನಾನು ಸಿಎಂ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದ್ದಾರೆ.
ನಮ್ಮ ಜಿಲ್ಲೆಯ ನದಿಗಳು ಸುಸೈಡ್ ಪಾಯಿಂಟ್ ಆಗುತ್ತಿದೆ. ಈ ಹಿನ್ನಲೆ ಜಿಲ್ಲೆಯ ನದಿಗಳಿಗೆ ಉತ್ತಮ ರೀತಿಯಲ್ಲಿ ತಡೆಗೋಡೆ ಕಟ್ಟಬೇಕು. ಅಲ್ಲದೇ ನದಿಯ ಸಮೀಪ ಸುರಕ್ಷತೆಯ ದೃಷ್ಟಿಯಿಂದ ಲೈಟ್ಗಳು ಹಾಗೂ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಅಗತ್ಯವಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೇಕ ನದಿಗಳಿದ್ದು, ಈ ನದಿಗಳನ್ನು ಪ್ರವಾಸೋದ್ಯಮ ತಾಣವಾಗಿ ಮಾಡಬೇಕು. ಜಿಲ್ಲೆಯ ಜೀವ ನದಿಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಈ ಕುರಿತು ಈಗಾಗಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.