ಕಾಸರಗೋಡು, ಆ 3 (Daijiworld News/MSP): ಬೆಂಗಳೂರಿನಿಂದ ಕಾರಿನಲ್ಲಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಭಾರೀ ಮೌಲ್ಯದ ಮಾದಕ ವಸ್ತುವನ್ನು ಬೇಕಲ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು , ವಿದ್ಯಾರ್ಥಿಯೋರ್ವನನ್ನು ಬಂಧಿಸಲಾಗಿದೆ.
ಬಂಧಿತನಿಂದ ರಿವಾಲ್ವರ್ , ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತನ ಜೊತೆ ಇದ್ದ ಇಬ್ಬರು ಪರಾರಿಯಾಗಿದ್ದಾರೆ. ಬಂಧಿತನನ್ನು ಕೋಜಿಕ್ಕೋಡ್ ವಳ್ಳಿಮಾಡಕುನ್ನುವಿನ ಮುಹಮ್ಮದ್ ಶಕೀಬ್ (21) ಎಂದು ಗುರುತಿಸಲಾಗಿದೆ. ಪರಾರಿಯಾದವರಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶನಿವಾರ ಮುಂಜಾನೆ ತೃಕ್ಕನಾಡ್ ಕಡಪ್ಪುರದ ಹೋಟೆಲ್ ವೊಂದರಲ್ಲಿ ಆಹಾರ ಸೇವಿಸುತ್ತಿದ್ದಾಗ ಅಲ್ಲಿಗೆ ತಲುಪಿದ ಬೇಕಲ ಪೊಲೀಸರನ್ನು ಕಂಡು ಮೂರು ಮಂದಿ ಬೇಗನೆ ಹೋಟೆಲ್ ನಿಂದ ಪರಾರಿಯಾಗಲೆತ್ನಿಸಿತು . ಸಂಶಯಗೊಂಡು ಪೊಲೀಸರು ಗಮನಿಸಿದಾಗ ಕರ್ನಾಟಕ ನೋಂದಾವಣೆಯ ಕಾರು ಅತೀ ವೇಗದಿಂದ ಚಲಾಯಿಸಿಕೊಂಡು ಮುಂದೆ ಸಾಗಿದ್ದು , ತಕ್ಷಣ ಪೊಲೀಸರು ಕಾರನ್ನು ಬೆನ್ನಟ್ಟಿದರು.
ಪೊಲೀಸರು ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದಾಗ ಇಬ್ಬರು ಕಾರಿನಿಂದ ಇಳಿದು ಪರಾರಿಯಾಗಿದ್ದು , ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಕಾರನ್ನು ತಪಾಸಣೆ ನಡೆಸಿದಾಗ ಮಾದಕ ವಸ್ತು , ಸಜೀವ ಗುಂಡುಗಳು ಪತ್ತೆಯಾದವು. ಪರಾರಿಯಾದ ಅಶ್ರಫ್ ಎಂಬಾತ ಪಾಲಕುನ್ನು ನಲ್ಲಿ ನಡೆದ ಗುಂಡು ಹಾರಾಟ ಸೇರಿದಂತೆ ಹಲವು ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ . ಬಂಧಿತ ಶಕೀಬ್ ಮಲಪ್ಪುರಂ ನ ಖಾಸಗಿ ಕಾಲೇಜೊಂದರ ಎಂಜಿನಿಯರಿಂಗ್ ವಿದ್ಯಾರ್ಥಿ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.