ಮಂಗಳೂರು, ಆ 3 (Daijiworld News/MSP): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇರೆ ಬೇರೆ ಹೆಸರುಗಳು ಇಡಬೇಕೆಂಬ ಬೇಡಿಕೆ ಬಹಳ ವರ್ಷದಿಂದ ಕೇಳಿ ಬರುತ್ತಿದೆ. ಇದರ ನಡುವೆ ಇತ್ತೀಚೆಗೆ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯ ಹೆಸರನ್ನು ಇಡಬೇಕೆಂಬ ಒತ್ತಾಯ ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿಯ ಮೂಲಕ ರಾಜ್ಯ ಸರ್ಕಾರಕ್ಕೆ ಈ ಪ್ರಸ್ತಾವನೆ ಕಳುಹಿಸಲಾಗಿದೆ ಎಂಬ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ.
ಆ. 3 ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸಿಇಓ ಡಾ.ಸೆಲ್ವಮಣಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಪುರುಷರಾದ ಕೋಟಿ- ಚೆನ್ನಯ ಅವರ ಹೆಸರಿಡುವಂತೆ ನಿರ್ಣಯಿಸಿ ಕಳುಹಿಸಬೇಕೆಂದು ಆಗ್ರಹಿಸಿದಾಗ ಮಾಹಿತಿ ನೀಡಿದ ಜಿಲ್ಲಾ ಪಂಚಾಯತ್ ಸಿಇಓ, ಈಗಾಗಲೇ ಈ ಪ್ರಸ್ತಾವನೆ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದ್ದು ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸಿ ನಂತರ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರು ಏರ್ ಪೋರ್ಟ್ ಗೆ ಕೆಂಪೇಗೌಡ, ಮುಂಬೈ ಏರ್ ಪೋರ್ಟ್ ಗೆ ಶಿವಾಜಿ' ಹೆಸರಿಟ್ಟಂತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರು ಬದಲಾವಣೆ ಮಾಡಿ ತುಳುನಾಡಿನ ವೀರ ಪುರುಷರಾದ ಕೋಟಿ-ಚೆನ್ನಯ ಅಥವಾ ತುಳುನಾಡಿನ ವೀರ ಮಹಿಳೆ ಅಬ್ಬಕ್ಕ ರಾಣಿ ಹೆಸರಿಡಬೇಕು ಎಂಬ ಕೂಗು ಕೇಳಿಬಂದಿತ್ತು. ಈಗ ಕೋಟಿ-ಚೆನ್ನಯ ಎಂಬ ಹೆಸರನ್ನಿಡಲು ನಿರ್ಧರಿಸಿದ್ದು ತುಳುನಾಡಿನ ಜನರಲ್ಲಿ ಸಂತಸವನ್ನು ತಂದಿದೆ.