ಕಾರ್ಕಳ, ಆ 3 (Daijiworld News/MSP): ಪರಿಸರ ಕಾಳಜಿ ವಹಿಸದೇ, ನಿರ್ಲಕ್ಷ್ಯ ತೋರಿ ನಿರ್ಜನ ಪ್ರದೇಶಗಳಲ್ಲಿ ಆಹೋರಾತ್ರಿ ತ್ಯಾಜ್ಯ ಎಸೆಯುವಂತಹ ಪರಿಪಾಠ ಎಲ್ಲೆಡೆಗಳಲ್ಲಿ ನಡೆಯುತ್ತಾ ಬಂದಿರುವುದು ಸರ್ವೇ ಸಾಮಾನ್ಯವಾಗಿದೆ. ಇಂತದೊಂದು ಎಡವಟ್ಟು ಮಾಡಿಕೊಂಡು ಸ್ಥಳೀಯ ಗ್ರಾಮ ಪಂಚಾಯತ್ವೊಂದಕ್ಕೆ "ಟಿಶ್ಯೂ ಪೇಪರ್ " ನಲ್ಲಿ ಪರಿಹಾರ ಕಂಡುಕೊಂಡಿದೆ.
ಬೆಳುವಾಯಿ-ಸಾಣೂರು ನಡುವೆ ಹಾದು ಹೋಗಿರುವ ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅವಾಂತರ ನಡೆದಿದೆ. ಮಂಗಳೂರಿನ ಪ್ರತಿಷ್ಠಿತ (ಟಿ. ಎಂ. ಪೈ)ಹಾಲ್ನಲ್ಲಿ ಜರುಗಿದ ಕಾರ್ಯಕ್ರಮವೊಂದರಲ್ಲಿ ಮಂಗಳೂರಿನ ಕ್ಯಾಟರಿಂಗ್ ಸಂಸ್ಥೆಯೊಂದಕ್ಕೆ ಊಟ ಒದಗಿಸುವ ವ್ಯವಸ್ಥೆಯ ಜವಾಬ್ದಾರಿಯನ್ನು ಕಾರ್ಯಕ್ರಮ ಆಯೋಜಕರು ವಹಿಸಿದ್ದರು. ಶುದ್ಧ ಸಸ್ಯಹಾರಿ ಊಟದ ವ್ಯವಸ್ಥೆಯನ್ನು ಆ ಕ್ಯಾಟರಿಂಗ್ ಸಂಸ್ಥೆಯು ತೀರ್ಥಹಳ್ಳಿಯ ಸಿದ್ಧಾರ್ಥ ಕ್ಯಾಟರಿಂಗ್ ಸಂಸ್ಥೆಗೆ ವಹಿಸಿತು.
ಮಂಗಳೂರಿನಲ್ಲಿ ಕಾರ್ಯಕ್ರಮ ಮುಗಿಸಿ ತಡರಾತ್ರಿ ಅಲ್ಲಿಂದ ಹೊರಟ್ಟಿದ್ದ ಕ್ಯಾಟರಸ್ಸ್ನವರು ಮರಳಿ ತೀರ್ಥಹಳ್ಳಿಗೆ ಹೋಗುವ ಸಂದರ್ಭದಲ್ಲಿ ಹಳಸಿದ ಆಹಾರ-ಪದಾರ್ಥ ಬಿಸಾಡಿದ ತಟ್ಟೆ, ಗ್ಲಾಸ್ಗಳನ್ನು ಕಪ್ಪುಬಣ್ಣದ 32 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟು ಅದನ್ನು ಬೆಳುವಾಯಿ-ಚಿಲಿಂಬಿ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ಎಸೆದು ಹೋಗಿದ್ದರು. ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದ್ದ ಕಾಂತಾವರ ಗ್ರಾಮ ಪಂಚಾಯತ್ಗೆ ಈ ಬೆಳವಣಿಯು ಕಗ್ಗಟ್ಟಾಗಿ ಮಾರ್ಪಟ್ಟಿತು. ಪ್ಲಾಸ್ಟಿಕ್ ಚೀಲ ಬಿಚ್ಚಿ ನೋಡಿದಾಗ ಆದರೊಳಗೆ ಟಿಶ್ಯೂ ಪೇಪರ್ ಲಭಿಸಿದ್ದು ಕ್ಯಾಟರಿಂಗ್ ಹೆಸರು ಮುದ್ರಣಗೊಂಡಿತು. ಅದನ್ನು ಗಮನಿಸಿದ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಅವರು ನೇರವಾಗಿ ತೀರ್ಥಹಳ್ಳಿಯ ಸಿದ್ಧಾರ್ಥ ಕ್ಯಾಟರಿಂಗ್ ಮಾಲಕರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡರು.
ಕೊನೆಗೂ ತಪ್ಪಿನ ಅರಿವು ಕಂಡ ಸಿದ್ಧಾರ್ಥ ಕ್ಯಾಟರಿಂಗ್ನವರು ಜುಲಾಯಿ ೩೧ರ ತಡರಾತ್ರಿ ಅಲ್ಲಿಗೆ ಎಸೆದ ತ್ಯಾಜ್ಯವನ್ನು ಮರುಸಂಗ್ರಹಿಸಿ ಆಟೋ ಟೆಂಪೋದಲ್ಲಿ ಕೊಂಡು ಹೋಗಿದ್ದಾರೆ. ಇದೇ ವಿಚಾರಕ್ಕೆ ಸಂಬಂಧ ಪಟ್ಟಂತೆ ಕಾಂತಾವರ ಗ್ರಾಮ ಪಂಚಾಯತ್ ತೀರ್ಥಹಳ್ಳಿಯ ಸಿದ್ಧಾರ್ಥ ಕ್ಯಾಟರಿಂಗ್ ಸಂಸ್ಥೆಗೆ ಆಗಸ್ಟ್ ೧ರಂದು ರೂ. ೭,೦೦೦ ದಂಡ ವಿಧಿಸಿದೆ. ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಕಾರ್ಯಚರಣೆ ನಡೆಸುವಲ್ಲಿ ಮುಂದಾಗಲಿದೆ ಎಂದು ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.