ಮಂಗಳೂರು, ಆ3 (Daijiworld News/RD): ನಿರ್ಮಾಣ ಹಂತದ ಕಟ್ಟಡದಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಆಯತಪ್ಪಿ ಬಿದ್ದು, ಮೃತಪಟ್ಟಿರುವ ಘಟನೆ ಕುಲಶೇಖರ ಡೈರಿ ಸಮೀಪದ ಕಟ್ಟಡದಲ್ಲಿ ಶುಕ್ರವಾರ ಸಂಭವಿಸಿದೆ.
ಮೃತಪಟ್ಟಿರುವ ಕಾರ್ಮಿಕ 47 ವರ್ಷದ ಮಹಾಬಲ ಎಂದು ಗುರುತಿಸಲಾಗಿದ್ದು, ಇವರು ಮೂಡುಪೆರಾರಿನ ಅರಿಕೆಪದವು ನಿವಾಸಿ. ಕುಟುಂಬದ ಆಧಾರಸ್ತಂಭವಾಗಿದ್ದ ಮಹಾಬಲ ಗೌಡ ತನ್ನ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮಧ್ಯಾಹ್ನ ವೇಳೆ ಕಟ್ಟಡದ 2ನೇ ಮಹಡಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಆಯತಪ್ಪಿ 1ನೇ ಮಹಡಿಗೆ ಬಿದ್ದಿದ್ದರು. ತೀವ್ರ ಗಾಯಗೊಂಡ ಪರಿಣಾಮ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮಹಾಬಲ ಗೌಡ ಕಳೆದ ಹಲವು ವರ್ಷಗಳಿಂದ ಕೂಲಿ ಕಾರ್ಮಿಕನಾಗಿಯೂ ಜೊತೆಗೆ ಮೇಸ್ತ್ರಿಯಾಗಿ ಕೆಲಸ ಮಾಡುತಿದ್ದು, ಸುಮಾರು 2 ತಿಂಗಳಿಂದ ಕುಲಶೇಖರದ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು.
ಕಂಕನಾಡಿ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.