ಉಡುಪಿ, ಆ.03(Daijiworld News/SS): ನಗರದಲ್ಲಿ ಹೆಚ್ಚುತ್ತಿರುವ ಅನೈತಿಕ ಚಟುವಟಿಕೆಗಳ ತಡೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ನಿಶಾ ಜೇಮ್ಸ್ ಸೂಚಿಸಿದ್ದಾರೆ.
ಫೋನ್ ಇನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಜ್ಜರಕಾಡು ಉದ್ಯಾನದ ಬಳಿ ರಾತ್ರಿಯ ಹೊತ್ತು ಕುಡುಕರ ಹಾವಳಿ ಹೆಚ್ಚಾಗಿದೆ ಎಂಬ ದೂರುಗಳಿದ್ದು, ರಾತ್ರಿಯ ಹೊತ್ತು ಗಸ್ತು ಹೆಚ್ಚಿಸಲಾಗುವುದು. ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಕುರಿತು ನಗರಸಭೆಗೆ ಪತ್ರ ಬರೆಯುವುದಾಗಿ ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು. ಜೊತೆಗೆ, ಅಜ್ಜರಕಾಡು ಉದ್ಯಾನದಲ್ಲಿ ಹಗಲು ಹಾಗೂ ರಾತ್ರಿ ಗಸ್ತು ವ್ಯವಸ್ಥೆಗೆ ತಕ್ಷಣ ವ್ಯವಸ್ಥೆ ಮಾಡಿ, ಅನೈತಿಕ ಚಟುವಟಿಕೆಗಳ ತಡೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಎಂದು ಪೊಲೀಸರಿಗೆ ಸೂಚಿಸಿದರು.
ನಗರದಲ್ಲಿ ಆಟೋಗಳು ಮೀಟರ್ ಹಾಕುವುದಿಲ್ಲ. ಪ್ರಯಾಣಿಕರಿಂದ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ಹೆಚ್ಚಾಗಿವೆ. ಈ ಹಿನ್ನಲೆಯಲ್ಲಿ ಮೀಟರ್ ಕಾರ್ಯ ನಿರ್ವಹಿಸದ ಆಟೋಗಳಿಗೆ ಹಾಗೂ ಹೆಚ್ಚು ದರ ಪಡೆಯುವ ಚಾಲಕರಿಗೆ ದಂಡ ವಿಧಿಸಿ, ನಗರದೆಲ್ಲೆಡೆ ವಿಶೇಷ ಕಾರ್ಯಾಚರಣೆ ನಡೆಸಿ ಎಂದು ಎಸ್ಪಿ ಹೇಳಿದ್ದಾರೆ.
ಪೊಲೀಸ್ ಠಾಣೆ ಇನ್ನೂ ಜನಸ್ನೇಹಿಯಾಗಿಲ್ಲ ಎಂಬ ಅಪವಾದ ಇದೆ. ಇದನ್ನು ತೊಡೆದುಹಾಕಲು ಠಾಣೆಯ ಸಿಬ್ಬಂದಿಗೆ ಸಾಫ್ಟ್ ಸ್ಕಿಲ್ ಟ್ರೈನಿಂಗ್ ನೀಡಲಾಗಿದೆ. ಠಾಣೆಗೆ ಬಂದವರ ಜತೆ ಸೌಜನ್ಯದಿಂದ ವರ್ತಿಸುವಂತೆ ಸ್ವಾಗತಗಾರರಿಗೆ ಸೂಚನೆ ನೀಡಲಾಗಿದೆ. ಬೀಟ್ ಮಾಡುವ ವೇಳೆ ಸಾರ್ವಜನಿಕರ ಜತೆ ಸೌಹಾರ್ದಯುತವಾಗಿ ವರ್ತಿಸುವಂತೆ ಸಿಬ್ಬಂದಿಗೆ ತಿಳಿಹೇಳಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಉಡುಪಿಯಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿಗಳನ್ನು ಜಾಲತಾಣದಲ್ಲಿ ಹರಡಬಾರದು. ಮಕ್ಕಳ ಅಪಹರಣ ಪ್ರಕರಣ ಜಿಲ್ಲೆಯಲ್ಲಿ ನಡೆದಿಲ್ಲ. ಸಾರ್ವಜನಿಕರು ಜವಾಬ್ದಾರಿಯಿಂದ ಜಾಲತಾಣ ಬಳಸಬೇಕು ಎಂದು ಸಲಹೆ ನೀಡಿದ್ದಾರೆ.