ಮಂಗಳೂರು, ಜು 02 (Daijiworld News/MSP): ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ಮೇಲ್ದರ್ಜೆಗೇರಿಸುವುದು ಸೇರಿದಂತೆ ಜಿಲ್ಲೆಗೆ ಮಂಜೂರಾಗಿ ಬಾಕಿ ಉಳಿದಿರುವ ಯೋಜನೆಗಳಿಗೆ ವೇಗ ನೀಡುವಂತೆ ಸಂಸದ ನಳಿನ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಗೆ ಕೇಂದ್ರೀಯ ವಿಶ್ವವಿದ್ಯಾಲಯ (ಸೆಂಟ್ರಲ್ ಯುನಿವರ್ಸಿಟಿ), ಐ.ಟಿ ಪಾರ್ಕ್, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅಥವಾ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮುಂತಾದ ಹೊಸ ಯೋಜನೆಗಳು ಮತ್ತು ಬಾಕಿಯಿರುವ ಯೋಜನೆಗಳ ಕುರಿತು ಪ್ರಧಾನಮಂತ್ರಿಗಳಿಗೆ ಸಂಸದ ನಳಿನ್ ಮನವಿ ಸಲ್ಲಿಸಿದರು.
ಮನವಿಗೆ ಸ್ಪಂಧಿಸಿದ ಪ್ರಧಾನಮಂತ್ರಿ ಮೋದಿ ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಜಿಲ್ಲೆಯ ಜನತೆಯ ಮೇಲೆ ನನಗೆ ಅತಿಯಾದ ಪ್ರೀತಿಯಿದೆ ಎಂದು ಪ್ರತಿಕ್ರಿಯಿಸಿ ಮನವಿಯ ಬಗ್ಗೆ ತಕ್ಷಣ ಅಧಿಕಾರಿಗಳ ವಿಶೇಷ ಸಭೆ ಕರೆದು ಮುಂದಿನ ದಿನಗಳಲ್ಲಿ ಈ ಯೋಜನೆಗಳ ಅನುಷ್ಠಾನಕ್ಕೆ ಸಹಕರಿಸುವುದಾಗಿ ಹಾಗೂ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಭರವಸೆ ನೀಡಿದರು.
ಇದೇ ವೇಳೆ ಜಿಲ್ಲೆಯಲ್ಲಿ ಪ್ರಧಾನಮಂತ್ರಿಗಳ ಆಶಯ ಯೋಜನೆಯಾದ ಮುದ್ರ ಮತ್ತು ಜನಧನ್ ಯೋಜನೆಗಳು ಅತ್ಯುತ್ತಮವಾಗಿ ಅನುಷ್ಠಾನಗೊಂಡಿದ್ದು ಜಿಲ್ಲೆಯಲ್ಲಿ ಸುಮಾರು 1.12 ಲಕ್ಷ ಜನರಿಗೆ ರೂ. 1,600 ಕೋಟಿ ಸಾಲಕೊಟ್ಟು ಉದ್ದಿಮೆದಾರರನ್ನಾಗಿ ಪ್ರೋತ್ಸಾಹಿಸಿದ ಯೋಜನೆಯ ವರದಿಯನ್ನು ನಳಿನ್ ಕುಮಾರ್ ಕಟೀಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು. ಸಂಸದರ ಈ ಕಾರ್ಯಕ್ಕೆ ಪ್ರಧಾನ ಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಬಳಿಕ ಪ್ರಧಾನಿಯವರು ಹಣಕಾಸು ಇಲಾಖೆಯ ಕಾರ್ಯದರ್ಶಿ ರಾಜೀವ್.ಕೆ.ಆರ್ ಇವರೊಂದಿಗೆ ಸಭೆ ನಡೆಸಿದರು. ಈ ಯೋಜನೆಯನ್ನು ಇಡೀ ದೇಶದಲ್ಲಿ ಈ ರೀತಿಯಾಗಿ ಅನುಷ್ಠಾನಿಸಿ ಮಾದರಿಯಾಗಿ ಮಾಡುವುದಕ್ಕೆ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಕೇಂದ್ರ ಸರಕಾರದ ಇನ್ನಿತರ ಯೋಜನೆಗಳನ್ನೂ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಹಣಕಾಸು ಇಲಾಖೆಯ ಕಾರ್ಯದರ್ಶಿ ರಾಜೀವ್.ಕೆ.ಆರ್ ಇವರ ನೇತೃತ್ವದಲ್ಲಿ ಸಭೆನಡೆಸಿ ಸಂಪೂರ್ಣ ಸಹಕಾರ ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದರು. ಸಂಸದ ಈ ಕಾರ್ಯವೈಖರಿಗೆ ಪ್ರಧಾನಮಂತ್ರಿಗಳು ಹಾಗೂ ಹಣಕಾಸು ಇಲಾಖೆಯ ಅಧಿಕಾರಿಗಳು ಅಭಿನಂದಿಸಿದರು.