ಮಂಗಳೂರು, ಜು 02 (Daijiworld News/MSP): ಮಂಗಳೂರು ಹಾಗೂ ಉಳ್ಳಾಲದ ನಡುವೆ ಇರುವ ,ನೇತ್ರಾವತಿ ಸೇತುವೆಯಲ್ಲಿ "ಸಿಸಿಟಿವಿ" ಅಳವಡಿಸಲು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಚಿಂತನೆ ನಡೆಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅಳಿಯ, ಕೆಫೆ ಕಾಫಿ ಡೇ ಸ್ಥಾಪಕ ಸಿದ್ದಾರ್ಥ ವಿ.ಜಿ ಅವರು ಕೆಲ ದಿನಗಳ ಹಿಂದೆಯಷ್ಟೇ ಉಳ್ಳಾಲದ ನೇತ್ರಾವತಿ ಸೇತುವೆಯ ಬಳಿಯಿಂದ ಕಣ್ಮರೆಯಾಗಿ ಬಳಿಕ ನದಿಯಲ್ಲಿ ಅವರ ಶವ ಪತ್ತೆಯಾದ ಹಿನ್ನಲೆಯಲ್ಲಿ , ಹಾಗೂ ನೇತ್ರಾವತಿ ಸೇತುವೆ ಸೂಸೈಡ್ ಪಾಯಿಂಟ್ ಆಗುತ್ತಿರುವುದನ್ನು ತಪ್ಪಿಸಲು ಸಿಸಿಟಿವಿ ಅಳವಡಿಸಲು ಶಾಸಕ ಚಿಂತನೆ ನಡೆಸಿದ್ದಾರೆ.
ಈ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, " ಮಂಗಳೂರಿನಿಂದ ಉಳ್ಳಾಲಕ್ಕೆ ಹೋಗುವ ರಸ್ತೆಯಲ್ಲಿ ಪ್ರಮುಖವಾಗಿ ಸಿಗುವ ನೇತ್ರಾವತಿ ಸೇತುವೆ ಅಥವಾ ಉಳ್ಳಾಲ ಸೇತುವೆಗೆ ಸಿಸಿಟಿವಿ ಅಳವಡಿಸಲು ಚಿಂತನೆ ಮಾಡಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಯವರೊಂದಿಗೆ ಸಮಾಲೋಚಿಸುತ್ತೇನೆ.
ನೇತ್ರಾವತಿ ಸೇತುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಅಪಾಯಕಾರಿ ತಾಣವಾಗಿ ಪರಿಣಮಿಸುತ್ತದೆ. ಆತ್ಮಹತ್ಯೆಯಂತಹ ಅಹಿತಕರ ಘಟನೆಗಳಿಗೆ ಇದು ಕಾರಣವಾಗುತ್ತಿದೆ. ಸಿಸಿಟಿವಿಗಳನ್ನು ಅಳವಡಿಸುವುದರಿಂದ ಸೇತುವೆಯ ಮೇಲೆ ನಡೆದ ದುರ್ಘಟನೆಗಳನ್ನು ತಕ್ಷಣ ಪರಿಶೀಲಿಸಲು ಅನುಕೂಲವಾಗುತ್ತದೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದರಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಸಮಯ ಮತ್ತು ಶ್ರಮ ವ್ಯರ್ಥವಾಗುವುದಿಲ್ಲ. ಇನ್ನು ಮನೆಯಿಂದ ನಾಪತ್ತೆಯಾಗುವ ವ್ಯಕ್ತಿಗಳ ಬಗ್ಗೆ ಇಂತಹ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳು ನಾಪತ್ತೆಯಾದವರ ಮನೆಯವರಿಗೆ, ಗೆಳೆಯರಿಗೆ ಹಾಗೇ ನಾಪತ್ತೆ ಪ್ರಕರಣಗಳ ತನಿಖೆ ನಡೆಸುವ ಪೊಲೀಸ್ ಅಧಿಕಾರಿಗಳಿಗೆ ಅನುಕೂಲವಾಗುತ್ತದೆ. ಒಟ್ಟಿನಲ್ಲಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಯಿಂದ ಪೊಲೀಸ್ ಇಲಾಖೆಗೆ ತನಿಖೆಗೆ ಸಹಕಾರಿಯಾಗುವುದನ್ನು ದೃಷ್ಟಿಯಲ್ಲಿಟ್ಟು ಈ ಬಗ್ಗೆ ಕ್ರಮ ಕೈಗೊಳ್ಳುಗುವುದು.
ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿಯೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮದ ಬಗ್ಗೆ ತಿಳಿಸುತ್ತೇನೆ "ಎಂದು ಶಾಸಕ ಬರೆದುಕೊಂಡಿದ್ದಾರೆ.
ಇದಕ್ಕೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದ್ದು, ಸಿಸಿಟಿವಿಯೊಂದಿಗೆ ಸೇತುವೆಯ ಎರಡೂ ಬದಿಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಸ್ವಲ್ಪ ಎತ್ತರಕ್ಕೆ ಕಬ್ಬಿಣದ ಜಾಲಿ ಅಳವಡಿಸಿ ಎಂದು ಸಲಹೆ ನೀಡಿದ್ದಾರೆ.