ಮಂಗಳೂರು: ವೀಕ್ಷಕರಿಂದ ಉತ್ತಮ ಪ್ರಶಂಸೆಗೆ ಪಾತ್ರವಾಯಿತು - ‘ಸೈಲೆನ್ಸ್ ಟು ಸೌಂಡ್, ಮೊಬೈಲ್ ಜರ್ನಿ’
Fri, Aug 02 2019 10:05:38 AM
ಮಂಗಳೂರು, ಆ 2 (Daijiworld News/RD): ಖ್ಯಾತ ಬರಹಗಾರ, ಪತ್ರಕರ್ತ ರಿಚ್ಚಿ ಜಾನ್ ಪಾಯೆಸ್ ಅವರ ‘ಸೈಲೆನ್ಸ್ ಟು ಸೌಂಡ್, ಮೊಬೈಲ್ ಜರ್ನಿ’ ಕಿರುಚಿತ್ರವು ಇತ್ತೀಚೆಗೆ ಯೂಟ್ಯೂಬ್ನಲ್ಲಿ ಬಿಡುಗಡೆಯಾಗಿದ್ದು, ಈಗಾಗಲೇ ಚಿತ್ರವು ವೀಕ್ಷಕರಿಂದ ಉತ್ತಮ ಪ್ರಶಂಸೆಗೆ ಪಾತ್ರವಾಗಿದ್ದು ಒಳ್ಳೆಯ ಅಭಿಪ್ರಾಯದ ಜೊತೆಗೆ ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದೆ.
ಈ ಕಿರುಚಿತ್ರವು 1940 ರಿಂದ 2019 ರ ಈ ಕಾಲಗಟ್ಟದಲ್ಲಿ ಮೊಬೈಲ್ ಫೋನ್ನ್ನು ಯಾವ ರೀತಿಯಾಗಿ ಬಳಕೆಯಾಗುತ್ತಿತ್ತು ಎಂಬ ಕಥೆಯನ್ನು ವಿಡಂಬನಾತ್ಮಕವಾಗಿ ಎಳೆ ಎಳೆಯಾಗಿ ವಿವರಿಸುತ್ತದೆ.
ಇದೊಂದು ಅಪರೂಪದ ಮೂಕ ಚಿತ್ರವಾಗಿದ್ದು, ಚಿತ್ರದ ಕೊನೆಯ ಭಾಗದಲ್ಲಿ ಕೇವಲ ಒಂದೇ ಸಂಭಾಷಣೆ ಇರುವುದನ್ನು ಕಾಣಬಹುದು. 1940 ರ ಅವಧಿಯನ್ನು ಚಿತ್ರದಲ್ಲಿ ಬ್ಲಾಕ್ ಆಂಡ್ ವೈಟ್ನಲ್ಲಿ ತೋರಿಸಿದ್ದು, ಚಿತ್ರದ ಎರಡನೇ ಭಾಗವು ಪ್ರಸ್ತುತ ದಿನಚರಿಯನ್ನು ತೋರಿಸುತ್ತಾ ಸಾಗುತ್ತದೆ. ಅದ್ದರಿಂದ 1970 ರಿಂದ 2019ರ ಕಾಲಘಟ್ಟವನ್ನು ವರ್ಣರಂಜಿತವಾಗಿ ಚಿತ್ರೀಕರಿಸಿದೆ.
ವಿಭಿನ್ನ ಕಥಾಹಂದರದ ಜೊತೆಗೆ ಆಳವಾದ ಸಂದೇಶ ನೀಡುವ ಕಿರುಚಿತ್ರವು ವಿಶ್ವದಾದ್ಯಂತ ನಡೆಯುವ ಅನೇಕ ಕಿರುಚಿತ್ರೋತ್ಸವಗಳಿಗೆ ಆಯ್ಕೆ ಮಾಡಲಾಗಿದೆ. 2019 ಮತ್ತು 2020ರಲ್ಲಿ ಈ ಚಿತ್ರವು ಅಲ್ಲಿ ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಇದೇ ಜುಲೈ 14ರಂದು ನ್ಯೂಯರ್ಕ್ನ ಲಿಫ್ಟ್-ಆಫ್ನಲ್ಲಿ ಈ ಚಿತ್ರ ಪ್ರದರ್ಶನಗೊಂಡಿದೆ.
ರಿಚ್ಚಿ ಜಾನ್ ಪಾಯೆಸ್ ಅವರು ಈ ಚಿತ್ರದ ಕಥೆ, ಚಿತ್ರಕಥೆಯನ್ನು ಬರೆದಿದ್ದು, 13.26 ನಿಮಿಷಗಳ ಅವಧಿಯಲ್ಲಿ ಈ ಕಿರುಚಿತ್ರವು ನಿರ್ಮಾಣಗೊಂಡಿದೆ. ಡಾಲ್ಫಿ ವಾಸ್ ಅಬುಧಾಬಿ ನಿರ್ಮಾಪಕರಾಗಿದ್ದು ಡಿಲ್ಲನ್ ಆಂಟೋನಿಯೊ ಕ್ರಿಯೇಟಿವ್ಸ್ನಡಿ ಮೂಡಿ ಬಂದಿದೆ.